ಮಂಗಳೂರು: ಕೊವಿಡ್‌ 19 ರ ಕಠಿಣ ಸಮಯದಲ್ಲಿ ಮುದುಡಿರುವ ಮನಸ್ಸುಗಳಿಗೆ ನವಚೈತನ್ಯ ತುಂಬಲು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಇನ್ನೋವೇಶನ್ ಕ್ಲಬ್‌ನ ವಿದ್ಯಾರ್ಥಿಗಳು ಇತ್ತೀಚೆಗೆ ಆನ್‌ಲೈನ್‌ನಲ್ಲೇ ‘ವಿಶ್ವ ನಗುವಿನ ದಿನ’ ಆಚರಿಸಿದರು.
ಕ್ಲಬ್ ಸದಸ್ಯೆ ಸುಷ್ಮಾ ಆಚಾರ್ಯ ಮಾತನಾಡಿ, ಆರೋಗ್ಯಕರ ಜೀವನಕ್ಕೆ ನಗುವಿನಿಂದಾಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವದಾದ್ಯಂತ 70 ಕ್ಕೂ ಹೆಚ್ಚು ದೇಶಗಳು ಮೇ ಮೊದಲ ಭಾನುವಾರ ‘ವಿಶ್ವ ನಗುವಿನ ದಿನ’ ಆಚರಿಸುತ್ತವೆ. ನಗು ಅತ್ಯುತ್ತಮ ಔಷಧ ಮತ್ತು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ, ಎಂದರು.
ಇನ್ನೋವೇಶನ್ ಕ್ಲಬ್ ಸಂಯೋಜಕ ಡಾ. ಸಿದ್ದರಾಜು, “ಈ ಆಚರಣೆಯ ಉದ್ದೇಶ ವಿದ್ಯಾರ್ಥಿಗಳನ್ನು ಸಕ್ರಿಯ ಮತ್ತು ಆರೋಗ್ಯಕರವಾಗಿಡುವುದು. ಯುವ ಮನಸ್ಸುಗಳು ಖಿನ್ನತೆಗೆ ಒಳಗಾಗುವುದು ಸಾಮಾನ್ಯ ‘ವಿಶ್ವ ನಗುವಿನ ದಿನ’ ಸಂತೋಷದ ಮತ್ತು ಹಗುರ ಕ್ಷಣಗಳನ್ನು ಹಂಚಿಕೊಳ್ಳಲು ಮತ್ತು ಸಂತೋಷವಾಗಿರಲು ಒಂದು ಅವಕಾಶ,” ಎಂದರು.

Advertisement


ಕ್ಲಬ್ ಸದಸ್ಯರಾದ ಸಲೋನಿ, ಚೇತನ್ ಎಂ ಮತ್ತು ಇತರ ಅನೇಕ ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮಗೆ ಖುಷಿಕೊಟ್ಟ ಕ್ಷಣಗಳನ್ನು ಹಂಚಿಕೊಂಡರು. ಗೌಸಿಯಾ, ಹಾಸ್ಯ ಪ್ರಸಂಗಗಳು ಮತ್ತು ತಮಾಷೆಯ ವೀಡಿಯೋ ತುಣುಕುಗಳನ್ನು ಹಂಚಿಕೊಂಡರು.
ಮೆಲ್ರೀನ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಪಲ್ಲವಿ ಸ್ವಾಗತಿಸಿದರೆ ಮತ್ತು ಸಂಗೀತಾ ಧನ್ಯವಾದ ಸಮರ್ಪಿಸಿದರು.

Advertisement
web