“ಗುಡುಗಿನಂತಹ ಶಕ್ತಿಯಿರುವ ಮಿಂಚಿನಂತಹ ಚಲನೆಯಿರುವ ನೂರುಮಂದಿ ಯುವಕರನ್ನು ಕೊಡಿ ನಾನು ಈ ರಾಷ್ಟ್ರವನ್ನೇ ಪುನರ್ ನಿರ್ಮಾಣ ಮಾಡುತ್ತೇನೆ…”
ಎಂದು ಶತಮಾನಗಳ ಹಿಂದೆಯೇ ಗುಡುಗಿದ. “ಒಂದು ಭಯಂಕರ ಬಿರುಗಾಳಿಯ ನಂತರ ಪ್ರಶಾಂತವಾದ ಶಾಂತಿ ನೆಲೆಸುತ್ತದೆ…”
ಎಂದು ನುಡಿದ ವಿಶ್ವಕಂಡ ಬಿರುಗಾಳಿಯ ಸಂತ ಸ್ವಾಮಿ ವಿವೇಕಾನಂದರ ಜನುಮದಿನ ಜನವರಿ 12.ಹೌದು ಈ ದಿನ “ವಿಶ್ವ ಯುವದಿನ..” ವಿಶ್ವದ ಚಾಲನಾ ಶಕ್ತಿ ಚಿಂತನಾ ಶಕ್ತಿ ನಮ್ಮ ಯುವಕರು.ಇಂದಿನ ಮುಂದಿನ ಎಲ್ಲಾ ಕ್ಷಣ ದಿನಗಳ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನುಗ್ಗಬಲ್ಲ ಧೀಮಂತ ಹನುಮ ಬಲ ಭೀಮ ಬಲ ಇರುವುದು ನಮ್ಮ ಯುವಸಮೂಹಕ್ಕೆ.
158ವರ್ಷಗಳ ಹಿಂದೆ ಜನವರಿ 12,1863ರಂದು ಕಲ್ಕತ್ತೆಯಲ್ಲಿ *ವಿಶ್ವನಾಥ ದತ್ತ,ಭುವನೇಶ್ವರೀ ದೇವಿ ದಂಪತಿ ಇವರ ಪುತ್ರರತ್ನವಾಗಿ ಮೂಡಿಬಂದ ನರೇಂದ್ರ ಬೆಳೆದುಬಂದ ವಿಷಯವೇ ರೋಚಕ.
ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಂಡ ನರೇಂದ್ರ ಅವರ ಶಿಷ್ಯರಾಗಿ ಮುಂದೆ 1893 ಸೆಪ್ಟೆಂಬರ11ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತದ ಕೀರ್ತಿ ಪತಾಕೆಯನ್ನೇರಿಸಿ ಸ್ವಾಮಿ ವಿವೇಕಾನಂದ.. ರೆನಿಸಿಕೊಂಡರು.
ಆದರೆ ಅವರು ಯಾರೂ ಮೂಡಿಸದ ಹೆಜ್ಜೆಗುರುತು ಮೂಡಿಸಿ ಬಿರುಗಾಳಿಯಂತೆ ಬಂದವರು ತಂಗಾಳಿಯಂತೆ ತನ್ನ ನಲುವತ್ತರ ವಸಂತವನ್ನೂ ಕಾಣಲಾಗದೆ 1902 ಜುಲೈ 4ರಂದು ಭಾರತ ಮಾತೆಯ ಮಡಿಲಲ್ಲಿ ಪಂಚಭೂತಗಳಲ್ಲಿ ಲೀನವಾದರೂ ಕೋಟಿಕೋಟಿ ಹೃದಯಗಳಲ್ಲಿ ಸದಾ ಬೆಳಗುವ ಆ-ನಂದದಾ ಜ್ಯೋತಿ.. ಯಾದರು.

Advertisement

ವಿವೇಕ ನುಡಿ ಬೆಳಕುಗಳು…. :-
ಇನ್ನೊಬ್ಬರನ್ನು ಮೀರಿ ನಿಲ್ಲುವುದು ಜೀವನವಲ್ಲ…ತನ್ನನ್ನು ತಾನು ಮೀರಿ ನಿಲ್ಲುವುದೇ ನಿಜವಾದ ಜೀವನ…..
ಭಾರತ ಕೇವಲ ಒಂದು ಭೂಭಾಗದ ತುಂಡಲ್ಲ…ಸಹನೆ,ಅನುಕಂಪ ಶಾಂತಿ-ಪ್ರೀತಿ-ಮೈತ್ರಿ ಭಾವದ ಪ್ರತೀಕ…..
ಯುವಜನತೆ ಭಾರತದ ಬೆನ್ನೆಲುಬು…ಇವರ ಶಕ್ತಿಯ ಮೇಲೆ ರಾಷ್ಟ್ರದ ಶಕ್ತಿ ನಿಂತಿದೆ..ಅವರೇ ನಮ್ಮ ಆಶಾಕಿರಣ….
ಯುವಜನತೆ ರಾಷ್ಟ್ರಶಕ್ತಿಯಾಗಿ ಸಂಪದ್ಭರಿತ ಸೆಲೆಯಾಗಿ,ತಾಯ್ನಾಡಿಗಾಗಿ ಹೋರಾಡುವ ಉತ್ಸಾಹಿಗಳಾಗಿ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಸದೆಬಡಿಯುವ ಧೀರರಾಗಿ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ರಾಷ್ಟ್ರವಾಹಿನಿಗೆ ಹರಿಯಬಿಟ್ಟು ಸದೃಢ ಭಾರತ ನಿರ್ಮಾಣದ ಶಿಲ್ಪಿಗಳಾಗ ಬೇಕು….
ಏಳಿ ಎದ್ದೇಳಿ….ಗುರಿಮುಟ್ಟುವ ತನಕ ವಿಶ್ರಮಿಸದಿರಿ… ಎಂದ ವಿವೇಕಾನಂದರ ವಾಣಿ ನಮ್ಮೆಲ್ಲರ ಬದುಕಿಗೆ ಶಂಖಧ್ವನಿಯಾಗಲಿ.ಸ್ವಾಮಿ ವಿವೇಕಾನಂದರು ಅಂದು ಹಚ್ಚಿದ ವಿವೇಕ ಆನಂದದಾ ಬೆಳಕು ಆರದಾ ನಂದಾದೀಪವಾಗಲಿ.

ಏಳಿ ಎದ್ದೇಳಿ…ಗುರಿಮುಟ್ಟುವ ತನಕ ವಿಶ್ರಮಿಸದಿರಿ…..

nrkಬರಹ: ನಾರಾಯಣ ರೈ ಕುಕ್ಕುವಳ್ಳಿ.


ಚುಕ್ಕಿ ಚಿತ್ರ:ಸೂರ್ಯ ಆಚಾರ್ ವಿಟ್ಲ

ಅಕ್ಷಜ್ ಸೂರಂಬೈಲು.

Advertisement
web