ಹೈನುಗಾರಿಕಾ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ಕೊರತೆ ನಿವಾರಣೆ ನಿಟ್ಟಿನಲ್ಲಿ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಹೈನುಗಾರಿಕಾ ಸಂಶೋಧನಾ ಕೇಂದ್ರ ಸ್ಥಾಪನೆಗೆ ಹೈನುಗಾರರ ಪರ ಪ್ರಸ್ತಾವನೆಯನ್ನು ಮಂಗಳೂರು ವಿವಿ, ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.ರಾಜ್ಯದ 14 ಸಹಕಾರಿ ಹಾಲು ಒಕ್ಕೂಟಗಳ ಪೈಕಿ ಅತಿ ಹೆಚ್ಚು ಗುಣಮಟ್ಟದ ಹಾಲನ್ನು ಉಡುಪಿ ಸಹಿತ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ 726 ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ನಿತ್ಯ 5ಲಕ್ಷ ಲೀ. ಹಾಲು ಸಂಗ್ರಹಿಸುತ್ತಿದೆ. ಒಕ್ಕೂಟಗಳ ಪೈಕಿ ಅತಿ ಹೆಚ್ಚಿನ ದರವನ್ನು ಹೈನುಗಾರರಿಗೆ ನೀಡುತ್ತಿದೆ. ಕೇಂದ್ರದ ಅಗತ್ಯವೇನು?ಹೈನುಗಾರಿಕಾ ಕ್ಷೇತ್ರದಲ್ಲಿ ನೂತನ, ಸಮರ್ಪಕ ತಾಂತ್ರಿಕತೆ ಅಳವಡಿಕೆ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆಯೊಂದಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಪನ್ಮೂಲಗಳ ಕ್ರೋಢೀಕರಣ, ಹೈನುಗಾರರಿಗೆ ಪೂರೈಕೆ ಅಗತ್ಯವಿದೆ. ಗುಣಮಟ್ಟದ ತರಬೇತಿಯನ್ನೂ ನೀಡಬೇಕಿದೆ.ಹೈನುಗಾರಿಕೆಯ ಎಲ್ಲಾ ಹಂತಗಳಿಗೆ ಸಂಬಂಧಿಸಿ ಅಧ್ಯಯನ, ಹಾಲಿನ ಗುಣಮಟ್ಟ ಹೆಚ್ಚಳಕ್ಕೆ ರಾಸು ತಳಿ, ರಾಸುಗಳ ಮೇಲೆ ಭೌಗೋಳಿಕ ಪರಿಣಾಮ, ಪಶು ಸಂಗೋಪನೆಯ ವಿವಿಧ ಮಜಲುಗಳ ಆಳ ಅಧ್ಯಯನ, ಸಂಶೋಧನೆಗಳ ಪ್ರಾಕ್ಟಿಕಲ್ ಅಳವಡಿಕೆ, ನೂತನ ತಂತ್ರಜ್ಞಾನಗಳ ನಿರಂತರ ಅಧ್ಯಯನದ ಅಗತ್ಯವಿದೆ.

Advertisement

ಹೈನುಗಾರಿಕಾ ಕ್ಷೇತ್ರವನ್ನು ತಾಂತ್ರಿಕವಾಗಿ ಬಲಪಡಿಸಿ ಸಂಪೂರ್ಣ ಅಟೊಮೇಶನ್, ಜನರಲ್ಲಿ ಹೈನುಗಾರಿಕೆ ಬಗ್ಗೆ ಆಸಕ್ತಿ ಹೆಚ್ಚಿಸುವುದು, ಹೈನುಗಾರಿಕಾ ಕೋರ್ಸ್ ಜಿಲ್ಲೆಯಲ್ಲಿ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಸಹಕಾರಿ ರಂಗ, ಶಿಕ್ಷಣ ರಂಗ, ಹಾಲು ಒಕ್ಕೂಟ ಹಾಗೂ ಸರಕಾರದ ಸಹಯೋಗದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕಿದೆ.

ಸ್ಥಳೀಯ ಪ್ರತಿಭೆಗಳಿಗೆ ಅವಕಾಶ, ಸಂಶೋಧನಾಸಕ್ತರಿಗೆ ಪೂರಕ ವಾತಾವರಣ, ತಂತ್ರಾಂಶ, ಮಾಹಿತಿ ಮತ್ತು ಆರ್ಥಿಕ ಸೌಲಭ್ಯ ಕಲ್ಪಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಳವಾದಾಗ ಅದರ ಮಾರುಕಟ್ಟೆಗೆ ಆಧುನಿಕ ತಂತ್ರಾಂಶದ ಸಮರ್ಪಕ ಬಳಕೆಯಾಗಬೇಕು.

ಗುಜರಾತಿನ ಅಮೂಲ್ ನಂತರ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತಿ ದೊಡ್ಡ ಬ್ರ್ಯಾಂಡ್ ಕರ್ನಾಟಕದ ನಂದಿನಿ ಆಗಿದ್ದು ಹೀಗಾಗಿ ಕರಾವಳಿ, ಕರ್ನಾಟಕದಲ್ಲಿ ಹೈನುಗಾರಿಕೆ ವಿಸ್ತರಣೆಗೆ ವಿಪುಲ ಅವಕಾಶವಿದೆ.

ಕರಾವಳಿಯೇ ಯಾಕೆ?ಡೈರಿ ಕ್ಷೇತ್ರದಲ್ಲಿ ಮುಂದುವರಿದ ತಾಂತ್ರಿಕತೆ, ಗುಣಮಟ್ಟದ ಸಂಪನ್ಮೂಲ, ಉತ್ತಮ ಶಿಕ್ಷಣ, ತಾಂತ್ರಿಕ ಬೆಳವಣಿಗೆಯ ಸಕಾರಾತ್ಮಕ ಸ್ವೀಕಾರ, ಉತ್ತಮ ಭೌಗೋಳಿಕ ಪರಿಸರ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಅಧೀನದಲ್ಲಿ ಹೈನುಗಾರಿಕಾ ವೈಜ್ಞಾನಿಕ ಸಂಶೋಧನಾ ಕೇಂದ್ರ ಸ್ಥಾಪನೆ ಹೆಚ್ಚು ಪ್ರಸ್ತುತವಾಗಿದೆ. 

——–*****———***
ಯಾರ್ಯಾರಿರಬೇಕು?
ಪ್ರತಿಭಾನ್ವಿತ ವಿದ್ಯಾರ್ಥಿಗಳು, ಹೈನುಗಾರಿಕೆಯಲ್ಲಿ ನುರಿತ ಕೃಷಿಕರು, ಹಾಲು ಒಕ್ಕೂಟದ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ತಜ್ಞರು, ತಂತ್ರಾಂಶ ಸಂಶೋಧಕರನ್ನೊಳಗೊಂಡ ಅಧ್ಯಯನ ಪೀಠ ಇರಬೇಕು.
ಸರಕಾರದ ಆರ್ಥಿಕ ನೆರವು, ಹಾಲು ಒಕ್ಕೂಟ ಹಾಗೂ ವಿವಿ ಮಾರ್ಗದರ್ಶನ, ಸಂಶೋಧನೆಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸಬೇಕು.
—————————–
ಪ್ರಯೋಜನವೇನು?
——————————ಸ್ಥಳೀಯ ಹಂತದಲ್ಲಿ ತಂತ್ರಾಂಶಗಳ ಸಮರ್ಪಕ ಆವಿಷ್ಕಾರ ಮತ್ತು ಬಳಕೆಯೊಂದಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ವಿಸ್ತರಣೆ. ಪಶು ಸಂಗೋಪನೆ, ಹೈನುಗಾರಿಕೆಯಲ್ಲಿ ಆಧುನಿಕತೆ, ವೈಜ್ಞಾನಿಕತೆಯಿಂದ ಸಮಗ್ರ ಅಭಿವೃದ್ಧಿ, ಸ್ಥಳೀಯ ಶಿಕ್ಷಣಾಸಕ್ತರಿಗೆ ಅವಕಾಶ, ಕೃಷಿ/ಹೈನುಗಾರಿಕೆಯಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ, ಸಂಪನ್ಮೂಲ ಕ್ರೋಢೀಕರಣ, ಉದ್ಯೋಗಾವಕಾಶ, ಹೈನುಗಾರಿಕೆಯಲ್ಲಿ ನಾವೀನ್ಯ, ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ, ಸಂಶೋಧನೆಗೆ ಒಲವು ಹೆಚ್ಚಬಹುದು. 

………………………..

*ದೇಶದ ಹೈನುಗಾರಿಕಾ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆಗಳ ತೀವ್ರ ಕೊರತೆಯಿದ್ದು ಆಳ ಅಧ್ಯಯನ ಅಗತ್ಯವಿದೆ. ಥಿಂಕ್ ಗ್ಲೋಬಲ್, ವರ್ಕ್ ಲೋಕಲ್ ನೆಲೆಯಲ್ಲಿ ಮಂಗಳೂರು ವಿವಿ ಅಧೀನದಲ್ಲಿ ಹೈನುಗಾರಿಕಾ ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ನವ ತಂತ್ರಜ್ಞಾನ ಶೋಧನೆಯು ಹೈನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯು ದೇಶಕ್ಕೆ ಮಾದರಿಯಾಗಲಿದೆ.ಸಾಣೂರು ನರಸಿಂಹ ಕಾಮತ್, ನಿರ್ದೇಶಕರು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ,ಮಂಗಳೂರು

………………………….
ಸಮಿತಿ ರಚನೆ, ತಿಂಗಳೊಳಗೆ ವರದಿ….
*ಮಂಗಳೂರು ವಿವಿಗೆ 3 ತಿಂಗಳ ಹಿಂದೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರ ಪರವಾಗಿ,ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಕಾರ್ಕಳದ ಶ್ರೀ ಮೋಹನ ಪಡಿವಾಳರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.ಸಲ್ಲಿಸಿದ ಪ್ರಸ್ತಾವನೆ ಕುರಿತು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ಅಧ್ಯಯನ ನಿಟ್ಟಿನಲ್ಲಿ ಮಂಗಳೂರುವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಹಿರಿಯ ಸಿಂಡಿಕೇಟ್ ಸದಸ್ಯರಾದ ಪ್ರೊಫೆಸರ್ ಡಿ. ಶಿವಲಿಂಗಯ್ಯನವರ ನೇತೃತ್ವದಲ್ಲಿ ಐದು ಮಂದಿ ಸಿಂಡಿಕೇಟ್ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.ಸಮಿತಿಯು ಪ್ರಸ್ತಾವನೆಯ ಅಂಶಗಳನ್ನು ಅಧ್ಯಯನ ಮಾಡಿ,ಹೈನುಗಾರಿಕೆಯ ಸಂಶೋಧನಾ ಕೇಂದ್ರವನ್ನು ಮಂಗಳೂರು ವಿವಿಯಲ್ಲಿ ತೆರೆಯುವ ಬಗ್ಗೆ ಸಾಧ್ಯತಾ ವರದಿಯನ್ನು ಒಂದು ತಿಂಗಳೊಳಗಾಗಿ ನೀಡುವಂತೆ ಮಾನ್ಯ ಕುಲಪತಿಯವರು ತಿಳಿಸಿರುತ್ತಾರೆ.

Advertisement
web