ತುಳುನಾಡು ಎಂದೇ ಪ್ರಸಿದ್ಧಿ ಪಡೆದಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ದೈವಾರಾಧನೆˌ ನಾಗರಾಧನೆˌ ನಾಗಮಂಡಲ ಇತ್ಯಾದಿಗಳಿಗೆ ಪ್ರಸಿದ್ಧಿ ಪಡೆದಿದೆ. ಜೊತೆಗೆ ಧರ್ಮಚಾವಡಿ ಗಳು ಕೂಡ ದೈವದ ಶಕ್ತಿಯನ್ನು ತನ್ನೊಳಗೆ ಆವರಿಸಿಕೊಂಡು ಕಾರಣಿಕ ಸ್ಥಳವಾಗಿದೆ.

Advertisement

ಇಂತಹ ಧರ್ಮಚಾವಡಿಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಪ್ರಕೃತಿ ಮಡಿಲಿನ ಸಿರಿ ಸೊಬಗಿನಲ್ಲಿರುವ ನುಳಿಯಾಲು ಶ್ರೀ ಧರ್ಮಚಾವಡಿಯೂ ಒಂದು.


ಸುಮಾರು 125 ವರ್ಷಗಳ ಹಿಂದೆ ಅಂದಿನ ಯಜಮಾನರಾಗಿದ್ದ ಕೀ.ಶೇ. ಸೋಮಪ್ಪ ರೈಗಳು ನುಳಿಯಾಲು ಶ್ರೀ ಧರ್ಮದೈವ ಧರ್ಮಚಾವಡಿಯನ್ನು ಕಟ್ಟಿಸಿದರೆಂಬ ಪ್ರತೀತಿಯಿದೆ.


ಮುಂದೆ ಕಾಲ ಪಲ್ಲಟದಿಂದ ಶಿಥಿಲಗೊಂಡ ಕಾರಣ ನುಳಿಯಾಲು ಕುಟುಂಬಸ್ಥರು ಬಂಧುಗಳು ದೈವಚಿಂತನೆಯಂತೆ ನೂತನ ಶ್ರೀ ಧರ್ಮಚಾವಡಿˌ ಶ್ರೀ ನಾಗರಕಟ್ಟೆˌ ಶ್ರೀ ರಕ್ತೇಶ್ವರೀ ಗುಡಿˌ ಪರಿವಾರ ದೈವಗಳ ಸ್ಥಾನ ಹಾಗೂ ತರವಾಡು ಮನೆ ಇತ್ಯಾದಿಗಳ ನಿರ್ಮಾಣ ಸುಮಾರು ಎರಡು ಕೋಟಿಗೂ ಮಿಕ್ಕಿದ ವೆಚ್ಚದಲ್ಲಿ ಕೇವಲ ಒಂದು ವರ್ಷದೊಳಗೆ ನಿರ್ಮಾಣಗೊಂಡಿರುವುದು ಒಂದು ದಾಖಲೆಯೇ ಸರಿ.
ನುಳಿಯಾಲು ಯಜಮಾನರಾದ ಶ್ರೀ ನುಳಿಯಾಲು ಜಗನ್ನಾಥ ರೈ ಹಾಗೂ ಕುಟುಂಬಸ್ಥ ಬಂಧುಗಳ ಸಹಕಾರದೊಂದಿಗೆ ಏಪ್ರಿಲ್ 20ˌ 2018 ಶುಕ್ರವಾರದಿಂದ ಏಪ್ರಿಲ್ 23 ಸೋಮವಾರದವರೆಗೆ ಶ್ರೀ ವೆಂಕಟರಮಣ ದೇವರುˌ ಶ್ರೀ ಧರ್ಮದೈವ ಬೀರ್ಣಾಳ್ವˌ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳˌ ಶ್ರೀ ನಾಗದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಊರ ಪರವೂರ ಭಕ್ತಾಭಿಮಾನಿಗಳ ಹಾಗೂ ಕುಟುಂಬಸ್ಥ ಬಂಧುಗಳ ಸೇರುವಿಕೆಯೊಂದಿಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯೊಂದಿಗೆ ನಡೆಯಿತು.


ಹಿಂದೆ ಕೇರಳದ ಕಡಾರು ಮನೆತನದ ಒಂದು ಕುಟುಂಬ ನುಳಿಯಾಳಿಗೆ ಬಂದು ನೆಲೆ ನಿಂತಿತ್ತು. ಈ ಕುಟುಂಬದ ಧರ್ಮದೈವ ಬೀರ್ಣಾಳ್ವ ನುಳಿಯಾಲು ಕುಟುಂಬಸ್ಥ ಬಂಧುಗಳು “ಅಪ್ಪೆ ದೈವ” ಎಂದೇ ನಂಬಿಕೊಂಡು ಬರುತ್ತಿರುವ ಶ್ರೀ ಬೀರ್ಣಾಳ್ವ ಎಲ್ಲರ ಕಷ್ಟ ನೋವುಗಳ ನಿವಾರಿಸುವ ದೈವವಾಗಿ ಆರಾಧನೆಗೊಳ್ಳುತ್ತಿದೆ.


ಪ್ರಕೃತಿಮಾತೆಯ ಮಡಿಲಲ್ಲಿ ಕಂಗೊಳಿಸುತ್ತಿರುವ ನುಳಿಯಾಲು ಶ್ರೀ ಧರ್ಮಚಾವಡಿˌ ತರವಾಡು ಮನೆ ನಿರ್ಮಾಣಗೊಂಡು ಎರಡು ವರ್ಷಗಳೇ ಸಂದುಹೋದವು.


-ನಿತಿನ್ ರೈ ಕುಕ್ಕುವಳ್ಳಿ

Advertisement
web