ನಾಳೆ ಮಂಗಳೂರು ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸಲು ಹಾಗೂ ಭಾರತ, ವಿದೇಶಗಳ ಪ್ರಮುಖ ನಗರಗಳಿಂದ ವಿಮಾನ ಸೇವೆಗಳಿಗೆ ಆಗ್ರಹಿಸಿ ಟ್ವಿಟ್ಟರ್ ಅಭಿಯಾನ ನಡೆಸಲಾಗುತ್ತಿದೆ

Advertisement

ಈ ಸಮಯದಲ್ಲಿ ಟ್ವಿಟ್ಟರ್ ಅಭಿಯಾನದ ಅವಶ್ಯಕತೆ ಏನು, ಯಾಕೆ ಅದನ್ನು ಮಾಡಬೇಕು ಎನ್ನುವ ಬಗ್ಗೆ ಸ್ವಲ್ಪ ಯೋಚಿಸಿ ನೋಡೋಣ

ಮಂಗಳೂರಿನ ಬಜ್ಪೆಯಲ್ಲಿ ಇರುವ ವಿಮಾನ ನಿಲ್ದಾಣವು ಮಂಗಳೂರು ಕರ್ನಾಟಕದ ಒಂದು ಪ್ರಮುಖ ನಗರ. ಪರಶುರಾಮ ಸೃಷ್ಟಿಯ ತುಳುನಾಡಿನ ಕೇಂದ್ರ ಸ್ಥಾನ, ಸುಂದರ, ವಿಶಾಲವಾದ ಅರಬ್ಬೀ ಸಮುದ್ರದ ತೀರದಲ್ಲಿ ಇರಯವುದರಿಂದ ಕಡಲ ನಗರಿಯೆಂದು ಪ್ರಸಿದ್ಧಿ ಪಡೆದಿದೆ.
ಆರ್ಥಿಕತೆಯ ವಿಷಯಕ್ಕೆ ಬಂದರೆ ಮಂಗಳೂರು ಕರ್ನಾಟಕದ ಎರಡನೆಯ ದೊಡ್ಡ ವಾಣಿಜ್ಯ ಕೇಂದ್ರ,ಕರ್ನಾಟಕದ ಪೆಟ್ರೋಕೆಮಿಕಲ್ ಉದ್ಯಮಕ್ಕೆ ಮಂಗಳೂರು ಕೇಂದ್ರ ಸ್ಥಾನ ಹಾಗೂ ಕರ್ನಾಟಕದ ಪೆಟ್ರೋಕೆಮಿಕಲ್ ಹಬ್ ಆಗಿ ಹೆಸರು ಮಾಡಿದೆ. ಮಂಗಳೂರಿನಲ್ಲಿ ಎಂಆರ್‌ಪಿಎಲ್, ಕುದ್ರೆಮುಖ ಅದಿರು ಕಾರ್ಖಾನೆ, ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್( ಎಂಸಿಎಫ್ )ನಂತಹ ದೊಡ್ಡ ಕಾರ್ಖಾನೆಗಳು ಇವೆ. ಎನ್‌ಎಂಪಿಟಿ(ನವ ಮಂಗಳೂರು ಬಂದರು) ”ಕರ್ನಾಟಕದ ಹೆಬ್ಬಾಗಿಲು” ಎಂದು ಪ್ರಸಿದ್ಧಿ ಪಡೆದಿದೆ.

ಶೈಕ್ಷಣಿಕ ವಿಷಯಕ್ಕೆ ಬಂದರೆ ಮಂಗಳೂರು ಪಶ್ಚಿಮ ಭಾರತದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದು ಆಗಿದೆ. ಎಜ್ಯುಕೇಷನಲ್ ಹಬ್ ಅಗಿಯು ಪ್ರಸಿದ್ಧಿ ಪಡೆದಿದೆ. ಮಂಗಳೂರಿನಲ್ಲಿ ಮಾಹೆ ( ಅವಿಭಜಿತ ದಕ್ಷಿಣ ಕನ್ನಡದ ಮಣಿಪಾಲದಲ್ಲಿ ಇದೆ ), ರಾಷ್ಟೀಯ ತಂತ್ರಜ್ಞಾನ ಸಂಸ್ಥೆ( NITK ), ಕೆಎಂಸಿ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಶ್ರೀನಿವಾಸ್ ಸಮೂಹ ಸಂಸ್ಥೆ , ಮಂಗಳೂರು ವಿಶ್ವವಿದ್ಯಾನಿಲಯ, ಯೆನೆಪೋಯ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ )ದಂತಹ ವಿದ್ಯಾ ಸಂಸ್ಥೆಗಳು ಇಲ್ಲಿ ಇವೆ.

ಧಾರ್ಮಿಕ ಹಾಗೂ ಪ್ರವಾಸೋದ್ಯಮಕ್ಕೂ ಕರ್ನಾಟಕದಲ್ಲಿ ಮಂಗಳೂರಿಗೆ ಪ್ರಮುಖ ಸ್ಥಾನವಿದೆ.ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ದೇವಸ್ಥಾನ, ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನ, ಕರ್ನಾಟಕದ ಶ್ರೀಮಂತ ದೇವಸ್ಥಾನವಾದ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲು ಇಂತಹ ಹಲವಾರು ಧಾರ್ಮಿಕ ಕೇಂದ್ರಗಳಿವೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಹಲವಾರು ಸುಂದರ ಕಡಲ ಕಿನಾರೆಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇಷ್ಟೇ ಅಲ್ಲದೆ ಇನ್ನು ಹಲವಾರು ವಿಶೇಷತೆಗಳು ಮಂಗಳೂರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.

ಇಷ್ಟೆ ಅಲ್ಲದೇ ತುಂಬಾ ಮಹತ್ವ ಇರುವ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇನೋ ಇದೆ, ಆದರೆ ವಿಮಾನ ಸಂಚಾರದ ಪಟ್ಟಿ ನೋಡಿದರೆ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ? ಎಂದು ಅನ್ನಿಸುತ್ತದೆ.!
ಹೌದು ಮಂಗಳೂರು ವಿಮಾನ ನಿಲ್ದಾಣ ಕರ್ನಾಟಕದ ಎರಡು ಅಂತಾರಾಷ್ಟ್ರೀಯ ನಿಲ್ದಾಣಗಳಲ್ಲಿ ಒಂದು( ಇನ್ನೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ), ಕರ್ನಾಟಕದ ಎರಡು ರನ್ವೇ ಇರುವ ಪ್ರಥಮ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮಂಗಳೂರು ವಿಮಾನ ನಿಲ್ದಾಣ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಭಾಗಗಳ ಜನರಿಗೆ ಉಪಯೋಗವಾಗುತ್ತಿದೆ.2017 -2018ರ ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಮಂಗಳೂರು ವಿಮಾನ ನಿಲ್ದಾಣ ದೇಶದ 23ನೇ ಅತ್ಯಂತ ಜನನಿಬಿಡ, ಕಾರ್ಯ ನಿರತ ವಿಮಾನ ನಿಲ್ದಾಣವಾಗಿತ್ತು, ಆದರೆ 2019 -2020ರ ವರ್ಷದಲ್ಲಿ 29ನೇ ಸ್ಥಾನಕ್ಕೆ ಕುಸಿದಿದೆ. ಮೊದಲೇ ರಾಜ್ಯ ಸರಕಾರ ಹಾಕುತ್ತಿದ್ದ ಇಂಧನ ತೆರಿಗೆಯಿಂದಾಗಿ ಕಡಿಮೆ ವಿಮಾನಗಳೊಂದಿಗೆ ಕಾರ್ಯಾಚರಿಸುತ್ತಿದ್ದ ವಿಮಾನ ನಿಲ್ದಾಣ, ಜೆಟ್ ವಿಮಾನಯಾನ ಸಂಸ್ಥೆ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದು ಹೊಡೆತದ ಹೊಡೆತ ಬಿದ್ದಿದೆ. ಜೆಟ್ ವಿಮಾನಯಾನ ಸಂಸ್ಥೆ ಮಂಗಳೂರಿಂದ ಪ್ರತಿ ದಿನ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ( ವಯಾ ಬೆಂಗಳೂರು), ದುಬೈ , ಅಬುಧಾಬಿಗೆ ವಿಮಾನ ಸೇವೆ ಒದಗಿಸುತ್ತಿತ್ತು, ಜೆಟ್ ವಿಮಾನಗಳ ಹಾರಾಟದ ಕಾಲದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಗತ ವೈಭವದ ಕಾಲವಾಗಿತ್ತು, ಆದರೆ ಈಗ ವಿಮಾನಗಳ ಸಂಖ್ಯೆ ಕಮ್ಮಿ ಆಗಿ ವಿಮಾನ ನಿಲ್ದಾಣ ಬಣಗುಡುತ್ತಿದೆ.

ಅಷ್ಟೇ ಅಲ್ಲದೆ ಉಡಾನ್ ಯೋಜನೆಯ ಅಡಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹಲವಾರು ಸ್ಥಳಗಳಿಂದ ವಿಮಾನ ದೊರಕಿ ಮಂಗಳೂರಿಗೆ ಪೈಪೋಟಿ ನೀಡುತ್ತಿದೆ, ಅಗಸ್ಟ್ನಲ್ಲಿ ಮಂಗಳೂರನ್ನು ಮೀರಿಸಿ ಎರಡನೇ ಸ್ಥಾನಕ್ಕೆ ಜಿಗಿದಿತ್ತು. ಕೋವಿಡ್ ಲೋಕ್ಡೌನ್ ಸಮಯದಲ್ಲಿ ಭಾರತ ಸರಕಾರ ಪ್ರಾರಂಭಿಸಿದ ವಂದೇ ಭಾರತ್ ಮಿಷನ್ನಲ್ಲಿ ಕೇರಳಕ್ಕೆ ಗಲ್ಫ್ ದೇಶಗಳಿಂದ ಹೆಚ್ಚು ವಿಮಾನಗಳು ಬಂದಿದ್ದವು ಆದರೆ ಮಂಗಳೂರಿಗೆ ಬಂದ ವಿಮಾನಗಳ ಸಂಖ್ಯೆ 50 ಕೂಡ ಮೀರಲಿಲ್ಲ. ಕರಾವಳಿ ಕರ್ನಾಟಕದ ಹೆಚ್ಚು ಉದ್ಯೋಗಿಗಳು ಗಲ್ಫ್ ದೇಶಗಳಲ್ಲಿ ಇದ್ದಾರೆ, ಆದರೂ ಮಂಗಳೂರನ್ನು ಕಡೆಗಣಿಸಲಾಯಿತು, ಸ್ಪೈಸ್ ಜೆಟ್ ಮೊನ್ನೆ ಏನೋ ದೆಹಲಿಯಿಂದ ಮಂಗಳೂರಿಗೆ ವಿಮಾನ ಸೇವೆ ಒದಗಿಸಿತು ಆದರೆ ಕೇವಲ ಎರಡು ದಿನ ಹಾರಾಡಿ, ಚಳಿಗಾಲದ ವೇಳಾಪಟ್ಟಿಯಲ್ಲಿ ಮಂಗಳೂರು-ದೆಹಲಿ ವಿಮಾನ ಸೇರಿಸುವುದಾಗಿ ಹೇಳಿದೆ. ಅದರಿಂದ ಇದೆ ರೀತಿ ಮುಂದುವರಿದರೆ ಮುಂದೆ ಒಂದು ದಿನ ಮಂಗಳೂರು ವಿಮಾನ ನಿಲ್ದಾಣ ಕೇವಲ ಬೆಂಗಳೂರು, ಮುಂಬೈ ವಿಮಾನಕ್ಕೆ ಸೀಮಿತವಾಗುವ ದಿನ ಬರುತ್ತದೆ.

ಅದರಿಂದ ನಾವು ಈಗಲೇ ಎಚ್ಚೆತುಕೊಂಡು ಜನಪ್ರತಿನಿಧಿ, ಸಂಬಂದ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ಮುಂದೆ ನಮಗೆ ಸದ್ಯ ಇರುವ ವಿಮಾನಗಳ ಜೊತೆಗೆ, ಹೆಚ್ಚು ಬೇಡಿಕೆ ಇರುವ ಸ್ಥಳಗಳಿಗೆ ನಿತ್ಯ ವಿಮಾನ ದೊರಕುತ್ತದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದು ಎಂದು ಪರಿಗಣಿಸಲ್ಪುಡತ್ತದೆ, ಹಾಗೂ ದೇಶದ ಕಾರ್ಯನಿರತ ವಿಮಾನ ನಿಲ್ದಾಣಗಳ ಪಟ್ಟಿಗೆ ಜಿಗಿತಗೊಳ್ಳುತದೆ. ಮಂಗಳೂರು ನಿಲ್ದಾಣದ ಕಾರ್ಯಾಚರಣೆ ಕಡಿಮೆಗೊಂಡರೆ ನಮಗೆ ಏನು ನಷ್ಟ?
ಹೌದು, ಇದು ಹೆಚ್ಚಿನವರಿಗೆ ಯೋಚನೆ ಬಂದಿರಬಹುದು. ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಕಡಿಮೆಗೊಂಡು ಬೇರೆ ಬೇರೆ ಸ್ಥಳಗಳಿಂದ ವಿಮಾನ ಸೇವೆ ಸ್ಥಗಿತಗೊಂಡರೆ:
1 . ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ವಿಮಾನಗಳಿಗೆ ಅವಲಂಬಿಸಿಕೊಂಡು ಬೇರೆ ಸ್ಥಳಗಳಿಗೆ ತಮ್ಮ ಕೆಲಸಕ್ಕೆ ಹೋಗುವವರಿಗೆ, ಕೊಲ್ಲಿ ರಾಷ್ಟ್ರಗಳಲ್ಲಿ ನಮ್ಮ ಊರಿನ ಉದ್ಯೋಗಿಗಳಿಗೆ,ತಮ್ಮ ಉದ್ಯಮದಲ್ಲಿ ತೊಡಗಿಕೊಂಡಿರುವ ಉದ್ಯೋಗಿಗಳಿಗೆ ನೇರ ವಿಮಾನಗಳಿಲ್ಲದೆ ಹತ್ತಿರದ ಕಣ್ಣೂರು ವಿಮಾನ ನಿಲ್ದಾಣವೋ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೋ ಅಥವಾ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೋ ಅಥವಾ ಬದಲಿ ವಾಹನ ಇದ್ದಾರೆ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಸಮಯದ ಜೊತೆಗೆ ಖರ್ಚು ಕೂಡ ಜಾಸ್ತಿಯೇ ಹೊರತು ಕಡಿಮೆ ಏನು ಅಲ್ಲ .
2 . ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಂಬಿ ಮಂಗಳೂರಿನಲ್ಲಿ ಉದ್ಯಮ ಮಾಡುತ್ತಿರುವ ಉದ್ಯಮದಾರರಿಗೆ, ಮಂಗಳೂರು ವಿಮಾನ ನಿಲ್ದಾಣದ ಬಳಕೆದಾರರಿಗೆ ತಂಗಲು ರೂಮ್ ನೀಡುವ , ಊಟ ನೀಡುವ ಹೋಟೆಲ್, ವಸತಿ ನಿಲಯದ ಮಾಲೀಕರಿಗೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಇರುವ ಅಂಗಡಿಗಳ ಮಾಲೀಕರಿಗೆ ಹೊಡೆತ ಬೀಳಲಿದೆ.
3 . ಅಷ್ಟೇ ಅಲ್ಲದೆ ಮಂಗಳೂರು, ಕರಾವಳಿ ಕರ್ನಾಟಕದ ಆರ್ಥಿಕತೆ, ಪ್ರವಾಸೋದ್ಯಮಕ್ಕೆ ಕೂಡ ಹೊಡೆತ ಬೀಳಲಿದೆ. ಇದರಿಂದ ಎಲ್ಲರಿಗೂ ನೇರವಾಗಿ ಅಥವಾ ಪರೋಕ್ಷವಾಗಿ ನಷ್ಟವಾಗಲಿದೆ.

ಮಂಗಳೂರು ವಿಮಾನ ನಿಲ್ದಾಣ ಇಂತಹ ದುಸ್ಥಿತಿಗೆ ತಲುಪಲು ಕಾರಣವೇನು?

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂತಹ ದುಸ್ಥಿತಿಗೆ ತಲುಪಲು ಕಾರಣಗಳು ಹಲವಾರು ಇದೆ.
ಅವುಗಳಲ್ಲಿ ಮುಖ್ಯವಾದದು ಇಲ್ಲಿವೆ:

1 . ಕರಾವಳಿ ಕರ್ನಾಟಕದ ಕಡೆಗಣನೆ:
ಹೌದು, ಕರಾವಳಿ ಕರ್ನಾಟಕವನ್ನು ಹೆಚ್ಚಿನ ವಿಷಯಗಳಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಕೂಗು ಎಲ್ಲಾ ಕಡೆಯಿಂದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಎತ್ತಿನಹೊಳೆ ಯೋಜನೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ವರ್ಷದಿಂದ ವರ್ಷಕ್ಕೆ ಬತ್ತಿ ಹೋಗುತ್ತಾ ಇದೆ. ಮಂಗಳೂರು, ಪುತ್ತೂರು ಹಾಗು ದಕ್ಷಿಣ ಕನ್ನಡದ ಪ್ರಮುಖ ನಗರ, ಗ್ರಾಮಗಳು ಕುಡಿಯುವ ನೀರಿಗಾಗಿ ನೇತ್ರಾವತಿ , ಕುಮಾರಧಾರ ನದಿಗಳನ್ನು ಅವಲಂಬಿಸುತ್ತದೆ. ಬೇಸಿಗೆಯಲ್ಲಿ ನದಿಗಳಲ್ಲಿ ನೀರು ಕಡಿಮೆಯಾದಾಗ ನೀರಿಗೆ ಸಮಸ್ಯೆ ಉಂಟಾಗಿರುವುದು ಎಲ್ಲರಿಗೆ ಗೊತ್ತೇ ಇದೆ.

ರೈಲಿನ ವಿಷಯಕ್ಕೆ ಬಂದರು ಕೂಡ ಕರಾವಳಿ ಕರ್ನಾಟಕ ದಕ್ಷಿಣ ರೈಲ್ವೆ ಹಾಗು ಕೊಂಕಣ ರೈಲ್ವೆಯ ಪಾಲಾಗಿದೆ. ತಮ್ಮ ಆರ್ಥಿಕತೆಗೆ ಕರಾವಳಿ ಕರ್ನಾಟಕವನ್ನು ಅವಲಂಬಿಸಿ ಸೇವೆಗಳನ್ನು ತಮ್ಮ ಕೇಂದ್ರ ಸ್ಥಾನಗಳಾದ ಕೇರಳ, ತಮಿಳುನಾಡು, ಗೋವಾ,ಮಹಾರಾಷ್ಟ್ರಕ್ಕೆ ಮಾತ್ರ ಒದಗಿಸುತ್ತಿದೆ, ಮಂಗಳೂರಿಂದ ಕರ್ನಾಟಕದ ಪ್ರಮುಖ ನಗರಗಳಿಗೆ ರೈಲು ಸಂಚಾರವೇ ಇಲ್ಲದಂತಾಗಿದೆ. ವಿಮಾನಯಾನ ವಿಷಯಕ್ಕೂ ಬಂದರೆ ಅಲ್ಲಿಯೂ ಕಡೆಗಣನೆ. ಕರ್ನಾಟಕದ ಬೇರೆ ಎಲ್ಲ ವಿಮಾನ ನಿಲ್ದಾಣಗಳು ಉಡಾನ್ ಯೋಜನೆಯಲ್ಲಿ ಸೇರಿಸಲಾಗಿದೆಯಾದರು ಮಂಗಳೂರು ವಿಮಾನ ನಿಲ್ದಾಣವನ್ನು ಸೇರಿಸಲಾಗಿಲ್ಲ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನಾಟಕದ ಉಡಾನ್ ಯೋಜನೆಯಲ್ಲಿ ಇಲ್ಲದ ಏಕೈಕ ವಿಮಾನ ನಿಲ್ದಾಣವಾಗಿದೆ. ನೆರೆಯ ರಾಜ್ಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಿಸಿ ಎರಡು ವರ್ಷಗಳದ್ದು ಮಾತ್ರ, ಆದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಿಸಿ 69 ವರ್ಷಗಳಾಗಿವೆ.
ಅಂದು ಡಿಸೆಂಬರ್ 25 1951ರಂದು ಸ್ವತಃ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಪಂಡಿತ್ ಜವಾಹರ‌ಲಾಲ್ ನೆಹರು ವಿಮಾನದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣ( ಅಂದು ಏರೋಡ್ರೋಮ್ ಆಗಿತ್ತು )ದಲ್ಲಿ ಇಳಿದಿದ್ದರು. ಆದರೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಾದ ವಿಮಾನಗಳನ್ನು ಕೇರಳಕ್ಕೆ ಒದಗಿಸಿ ಮಂಗಳೂರಿಗೆ ಕೇವಲ ಮುಂಬೈ, ಬೆಂಗಳೂರು, ಹೈದರಾಬಾದ್ ನಿಂದ ನಿತ್ಯ ವಿಮಾನ, ಚೆನ್ನೈನಿಂದ ಎರಡು ದಿನಕ್ಕೆ ಒಮ್ಮೆ ವಿಮಾನ ಒದಗಿಸಲಾಗುತ್ತಿದೆ. ಏರ್ ಇಂಡಿಯಾ ತನ್ನ ಮುಂಬೈ-ಕೊಚ್ಚಿ ವಿಮಾನ ರದ್ದುಗೊಳಿಸಿ ಕೇರಳದ ಪ್ರಯಾಣಿಕರ ಆಕ್ರೋಶ ತಣಿಸಲು ಮಂಗಳೂರು-ಮುಂಬೈ ಮಧ್ಯೆ ಹಾರುತ್ತಿದ್ದ ವಿಮಾನವನ್ನು ಈಗ ಮುಂಬೈ-ಮಂಗಳೂರು-ಕೊಚ್ಚಿ-ಮುಂಬೈ ಆಗಿ ಹಾರಿಸುತ್ತಿದೆ, ಇದರಿಂದ ಮಂಗಳೂರಿಂದ ಪ್ರಯಾಣಿಸುವವರಿಗೆ ನಾಲ್ಕು ಗಂಟೆ ವ್ಯರ್ಥವಾಗುತ್ತಿದೆ.
2 . ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರಕಾರ ವಿಮಾನ ಇಂಧನಕ್ಕೆ ಹಾಕುತ್ತಿರುವ ದುಬಾರಿ ತೆರಿಗೆ: ಹೌದು, ಕೇರಳ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂಧನಕ್ಕೆ ಬೀಳುತ್ತಿರುವ ತೆರಿಗೆ ತುಂಬಾ ಜಾಸ್ತಿ ಇದೆ. ಕೇರಳ ಸರಕಾರ ತನ್ನ ರಾಜ್ಯದಲ್ಲಿ ಇರುವ ಎಲ್ಲ ವಿಮಾನ ನಿಲ್ದಾಣಗಲ್ಲಿ ವಿಮಾನಯಾನ ಸಂಸ್ಥೆಗಳಿಂದ 10 ಶೇಕಡಕಿಂತಲೂ ಕಡಿಮೆ ತೆರಿಗೆ ವಿಧಿಸುತ್ತಿದೆ, ಆದರೆ ಕರ್ನಾಟಕದಲ್ಲಿ 20 ಶೇಕಡಕಿಂತಲೂ ಜಾಸ್ತಿ ತೆರಿಗೆಯನ್ನು ಸರಕಾರ ವಿಧಿಸುತ್ತಿದೆ. ಇದರಿಂದ ವಿಮಾನಯಾನ ಸಂಸ್ಥೆಗಳು ಆಗುವ ನಷ್ಟವನ್ನು ತಪ್ಪಿಸಲು ಕೇರಳವನ್ನೇ ನೆಚ್ಚಿಕೊಂಡಿದೆ, ಮಂಗಳೂರು ವಿಮಾನ ನಿಲ್ದಾಣದಿಂದ ಹೊಸ ಮಾರ್ಗಗಳಲ್ಲಿ ವಿಮಾನ ಹರಡಿಸಲು ಹಿಂಜರಿಯುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದ ದುಸ್ಥಿತಿ ಸರಿಪಡಿಸಲು ಏನು ಮಾಡಬಹುದು?

1 .ಮಂಗಳೂರು ವಿಮಾನ ನಿಲ್ದಾಣದ ದುಸ್ಥಿತಿಯನ್ನು ಸರಿಪಡಿಸಲು ಮೊದಲಿಗೆ ಹೆಚ್ಚು ಬೇಡಿಕೆ ಇರುವ ಹಾಗು ಬೇಡಿಕೆಯಲ್ಲಿ ಇರುವ ಸ್ಥಳಗಳಿಗೆ ನಿತ್ಯ ಅಥವಾ ನಿಗದಿತ ದಿನಗಳಲ್ಲಿ ವಿಮಾನ ಸಂಚರಿಸಬೇಕು. ಮುಖ್ಯವಾಗಿ ಮಂಗಳೂರಿಂದ ದೆಹಲಿ, ಕೊಲ್ಕತ್ತಾ, ಅಹಮದಾಬಾದ್, ಜೈಪುರ್ , ವಿಶಾಖಪಟ್ಟಣ, ಕೊಚ್ಚಿ, ಅಗತ್ತಿ, ಪೋರ್ಟ್ ಬ್ಲೇರ್, ತಿರುವನಂತಪುರ, ಕೊಯಮತ್ತೂರು, ಚೆನ್ನೈ, ಬೆಂಗಳೂರು, ನಾಗ್ಪುರ, ಪುಣೆ, ಗುವಾಹಟಿ, ಶ್ರೀನಗರ,ಗೋವಾ,ಬೆಳಗಾವಿ, ಗುಲ್ಬರ್ಗ, ಹುಬ್ಬಳ್ಳಿ,ಮೈಸೂರು,ವಿಜಯವಾಡ,ಮದುರೈ,ಶಿಲ್ಲಾಂಗ್ ( ಈಶಾನ್ಯ ಭಾರತದ ವಿದ್ಯಾರ್ಥಿಗಳು ಮಂಗಳೂರು ಹಾಗು ಹತ್ತಿರದ ನಗರಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಕಾರಣ ), ದುಬೈ, ಅಬುಧಾಬಿ, ಶಾರ್ಜಾ, ರಾಸ್ ಅಲ ಖೈಮಾ, ಕುವೈಟ್, ಬಹರೇನ್, ದಮ್ಮಾಮ್, ದೋಹಾ, ರಿಯಾದ್, ಮಸ್ಕಟ್, ಸಲಾಹ್, ಜೆಡ್ಡಾ, ಸಿಂಗಾಪುರ, ಕೌಲಾಲಂಪುರ್, ಬ್ಯಾಂಕಾಕ್, ಕೊಲಂಬೊ, ಮಲೇ, ಲಂಡನ್ ( ನೇರ ವಿಮಾನ ಅಥವಾ ವಯಾ ಬೆಂಗಳೂರು )ಗೆ ವಿಮಾನ ಪ್ರಾರಂಭಿಸಬೇಕು.

2 . ಮಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ರನ್ವೇಯನ್ನು ಕನಿಷ್ಠ ಪಕ್ಷ ಹತ್ತು ಸಾವಿರ ಅಡಿಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಇದರಿಂದ ಬೋಯಿಂಗ್ 747 , 777 , 787ನಂತಹ ದೊಡ್ಡ ವಿಮಾನಗಳು ಮಂಗಳೂರಿನಲ್ಲಿ ಇಳಿಯಬಹುದು.
3 . ಕರ್ನಾಟಕ ಸರಕಾರ ವಿಮಾನ ಇಂಧನಕ್ಕೆ ವಿಧಿಸುತ್ತಿರುವ ತೆರಿಗೆಯನ್ನು ಹತ್ತು ಶೇಕಡಕಿಂತ ಕಡಿಮೆ ತೆರಿಗೆ ವಿಧಿಸಬೇಕು ಮತ್ತು ಬೇರೆ ಬೇರೆ ವಿಮಾನಯಾನ ಸಂಸ್ಥೆಗಳನ್ನು ಮಂಗಳೂರಿಗೆ ಸೇವೆ ಪ್ರಾರಂಭಿಸುವಂತೆ ಆಕರ್ಷಿಸಲು ಕ್ರಮ ಕೈಗೊಳ್ಳಬೇಕು
4 . ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಂತ ಜಾಲತಾಣ ಇಲ್ಲದಿರುವುದರಿಂದ ವಿಮಾನ ನಿಲ್ದಾಣದ ವಿಮಾನ ವೇಳಾಪಟ್ಟಿ, ವಿಮಾನ ನಿಲ್ದಾಣದ ಸೇವೆಗಳ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ, ಅದರಿಂದ ಸ್ವಂತ ಜಾಲತಾಣ ಮಾಡಬೇಕು ಹಾಗೂ ಅದರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಜಾಲತಾಣದ ರೀತಿಯಲ್ಲಿ ಎಲ್ಲ ಮಾಹಿತಿ ನೀಡಬೇಕು
ಇಷ್ಟು ಎಲ್ಲ ಸಮಸ್ಯೆ ಬೇಡಿಕೆಗಳಿದ್ದು, ನಾವು ಸುಮ್ಮನೆ ಕುಳಿತು ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಅದರಿಂದ ನಾವು ಆಗ್ರಹಿಸಲು ಆಗದಿದ್ದರೂ ಈಗ ಅಭಿಯಾನ ನಡೆಸುತ್ತಿರುವ ಸಂಘಟನೆಗಳಿಗೆ ಬೆಂಬಲ ನೀಡೋಣ, ಅಭಿಯಾನದಲ್ಲಿ ಟ್ವೀಟ್ ಮಾಡಿ, ಮರು ಟ್ವೀಟ್ ಮಾಡಿ, ಉಳಿದವರನ್ನು ಟ್ವೀಟ್ ಮಾಡಲು ಉತ್ತೇಜಿಸೋಣ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದೇಶದ ಮಾದರಿ ವಿಮಾನ ನಿಲ್ದಾಣವನ್ನಾಗಿ ಮಾಡೋಣ.

Advertisement:
sharanya
jyo
bharath

Advertisement
web