ಮೈಸೂರು : ವಿಶ್ವವಿಖ್ಯಾತ ದಸರಾ ಹಬ್ಬಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತವೂ ಈ ಬಾರಿ ಕೋವಿಡ್ ಕಾರಣದಿಂದಾಗಿ ಸರಳವಾಗಿ ಸುಸೂತ್ರ ಆಚರಣೆಗೆ ಪೂರ್ವ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಗಜಪಡೆಗೆ ಅರಮನೆಯ ಆವರಣದಲ್ಲಿ ತಾಲೀಮು ನಡೆಯುದರ ಜೊತೆಗೆ ಆಚರಣೆಗೂ ಸಿದ್ಧತೆ ನಡೆಯುತ್ತಿದೆ.

Advertisement

ಹಾಗೆಯೇ ರಾಜವಂಶಸ್ಥರು ಪೂಜಾ ಕಾರ್ಯಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅರಮನೆ ಆಡಳಿತ ಮಂಡಳಿಯವರು ಕೆಟ್ಟಿರುವ ಬಲ್ಬ್ ಗಳನ್ನು ಬದಲಿಸುವ ಕಾರ್ಯ ನಡೆಯುತ್ತಿದ್ದು, ಅರಮನೆಯು ಸುವರ್ಣ ಬಣ್ಣದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಮನ ಸೆಳೆಯುವ ವಾಸ್ತುಶಿಲ್ಪ ನೋಡುಗರ ಆಕರ್ಷಿಸುತ್ತದೆ.

ದಸರಾ ಸಮಯದಲ್ಲಿ ರಾತ್ರಿ 7ರಿಂದ 9 ಗಂಟೆವರೆಗೆ 2 ಗಂಟೆಗಳ ಕಾಲ ದೀಪಾಲಂಕಾರವಿರಲಿದ್ದು ಅರಮನೆ ಹಾಗೂ ಅದರ ಕಾಂಪೌಂಡ್ ಗೆ 1 ಲಕ್ಷ ಬಲ್ಬ್ ಗಳನ್ನು ಅಳವಡಿಸಿದ್ದು, ಪ್ರತೀ ವರ್ಷವೂ ಕೆಟ್ಟ ಬಲ್ಬ್ ಗಳನ್ನು ಬದಲಾಯಿಸಲಾಗುತ್ತದೆ. ಹಾಗೂ ಪ್ರತಿ ಬಾರಿ ಅರಮನೆಗೆ ಶೇ.10ರಷ್ಟು ಬಲ್ಪ್ ಗಳನ್ನು ಬದಲಿಸಲಾಗುತ್ತಿದೆ. ಹಾಗೆಯೇ ಎತ್ತರದಲ್ಲಿರುವ ಬಲ್ಬ್‌ ಗಳನ್ನು ಕ್ರೇನ್ ಹಾಗೂ ಡ್ರೋನ್ ಸಹಾಯದಿಂದ ಬದಲಾವಣೆ ಮಾಡುವ ಕಾರ್ಯ ನಡೆಯುತ್ತಿದೆ.

ಇದೀಗ ಮಳೆಯಿಂದಾಗಿ ಅರಮನೆಗೆ ಅಳವಡಿಸಿರುವ ನೂರಾರು ಬಲ್ಬ್ ಗಳು ಕೆಟ್ಟು ಹೋಗಿವೆ. ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ 1942ರ ಸುಮಾರಿನಲ್ಲಿ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿಸಲಾಯಿತು.
ತೇಗದ ಮರದ ಪಟ್ಟಿಗಳ ಮೇಲೆ ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನುಅಳವಡಿಸಲಾಗಿದೆ.

ದಸರಾ ಹಬ್ಬಕ್ಕೆ ಅರಮನೆಯ ಪವರ್ ಹೌಸ್ ನಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅರಮನೆ ಹಾಗೂ ಗೇಟ್ ಗಳಿಗೆ ಮೂರು ಪ್ರತ್ಯೇಕ ಸ್ವಿಚ್ ಗಳಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಸಿಬ್ಬಂದಿಗಳು ಏಕಕಾಲಕ್ಕೆ ಮೂರು ಸ್ವಿಚ್ ಗಳನ್ನು ಆನ್ ಮಾಡಿದಾಗ ಸ್ವಿಚ್ ಹಾಕಿದ ತಕ್ಷಣ ಇಡೀ ಅರಮನೆ ಚಿನ್ನದ ಬಣ್ಣದಿಂದ ಬೆಳಗಿ ಸ್ವರ್ಗವೇ ಧರೆಗಿಳಿದಂತೆ ಕಂಗೊಳಿಸುತ್ತದೆ. ಅಷ್ಟು ಮಾತ್ರವಲ್ಲದೆ ನಗರದ ಪ್ರಮುಖ ವೃತ್ತಗಳಲ್ಲಿಯೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸುವ, ವೈರ್‌ ಗಳ ಮಾಲೆಗಳನ್ನು ಇಳಿ ಬಿಡುವ ಕಾರ್ಯ ಭರದಿಂದ ಸಾಗಿದೆ.

Advertisement
web