ಮಂಗಳೂರು/ಬೆಳಗಾವಿ: 2020ರ ಏಪ್ರಿಲ್‌ನಿಂದ ಅಕ್ಟೋಬರ್ ತನಕದ ಪ್ರಯಾಣಿಕರ ದಟ್ಟಣೆಯಲ್ಲಿ ಕರ್ನಾಟಕದಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲನೆಯ ಸ್ಥಾನದಲ್ಲಿ ಇದ್ದರೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡನೇ ಸ್ಥಾನದಲ್ಲಿ ಹಾಗು ಬೆಳಗಾವಿ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿ ಇದೆ.

Advertisement

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದೆ. 2018 ಮತ್ತು 2019ರಲ್ಲಿ 3ನೇ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಪಡೆದಿತ್ತು. ಆದರೆ, ಈ ವರ್ಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಅದೇ ಇದೆ ವರ್ಷದ ಜೂನ್,ಜುಲೈ ಹಾಗು ಆಗಸ್ಟ್ ತಿಂಗಳಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೆಪ್ಟೆಂಬರ್ ತಿಂಗಳ ನಂತರ ಪುನಃ ಎರಡನೇ ಸ್ಥಾನಕ್ಕೆ ಏರಿದೆ.ಅಕ್ಟೋಬರ್ ತಿಂಗಳಿನಲ್ಲಿ ಮಂಗಳೂರು ವಿಮಾನ ನಿಲ್ದಾಣ ಮೂಲಕ 53 ,566 ಜನರು ಪ್ರಯಾಣಿಸಿದ್ದಾರೆ.

ಆದರೆ ವಿಮಾನಗಳ ಹಾರಾಟದ ಸಂಖ್ಯೆಯಲ್ಲಿ ಬೆಂಗಳೂರು ನಂತರದ ಸ್ಥಾನದಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಇದ್ದರೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿ ಇದೆ.

ಉಡಾನ್ ಯೋಜನೆಯಡಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚು ವಿಮಾನ ಸೇವೆಗಳು ದೊರಕುತ್ತಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವಾಸಿ,ಧಾರ್ಮಿಕ, ಆರ್ಥಿಕತೆಯ ತಾಣವಾದ ಮಂಗಳೂರಿನಲ್ಲಿ ಇದ್ದರೂ ಕೂಡ ಉಡಾನ್ ಯೋಜನೆಯಿಂದ ವಂಚಿತವಾಗಿದೆ.

ಕೊರೊನ ಮಹಾಮಾರಿಯಿಂದಾಗಿ ಸ್ಥಗಿತಗೊಂಡ ವಿಮಾನ ಸಂಚಾರದಿಂದ ಮಂಗಳೂರಿಗೆ ಬರುವ ವಿಮಾನಗಳ ಸಂಖ್ಯೆ ಕಡಿಮೆಯಾಗಿದೆ.

2018 ಮತ್ತು 2019ರಲ್ಲಿ 3ನೇ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ ಪಡೆದಿತ್ತು.ಆದರೆ ಈ ವರ್ಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.ಅಕ್ಟೋಬರ್ ತಿಂಗಳಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ 8 ,615 ಜನ ಪ್ರಯಾಣಿಸಿದ್ದಾರೆ.

ಲಾಕ್ ಡೌನ್ ಬಳಿಕ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮೊದಲು ವಿಮಾನ ಹಾರಾಟ ಆರಂಭಿಸಲಾಯಿತು. ಇದರಿಂದ ಬೆಳಗಾವಿ ವಿಮಾನ ನಿಲ್ದಾಣ ಹತ್ತಿರವಿದ್ದರು,ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅವಲಂಬಿಸುತ್ತಿದ ಜನರು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು ಪ್ರಾರಂಭಿಸಿದರು. ಆದ್ದರಿಂದ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಕೊರತೆ ಎದುರಾಯಿತು. ಅಕ್ಟೋಬರ್ ತಿಂಗಳಿನಲ್ಲಿ 26,183 ಜನರು ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸೇವೆ ಪುನಃ ಆರಂಭವಾಗಿದೆ. ಏರ್ ಇಂಡಿಯಾ ಸಹ ಶೀಘ್ರದಲ್ಲಿಯೇ ಸಂಚಾರ ಪುನಃ ಆರಂಭಿಸಲಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲ್ಲಿಗೆ ಎಷ್ಟು ಪ್ರಯಾಣಿಕರು:

2020ರ ಏಪ್ರಿಲ್‌ನಿಂದ ಅಕ್ಟೋಬರ್ ತನಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ 42,122 ವಿಮಾನಗಳು ಆಗಮಿಸಿವೆ. 35,47,644 ಜನರು ಆಗಮಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿಯೇ 11,770 ವಿಮಾನ ಆಗಮಿಸಿವೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ 1,727 ವಿಮಾನಗಳು ಸಂಚಾರ ನಡೆಸಿದ್ದು, 1,27,725 ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣ ಮೂಲಕ ಪ್ರಯಾಣಿಸಿದ್ದಾರೆ.ಅಕ್ಟೋಬರ್ ತಿಂಗಳಿನಲ್ಲಿಯೇ 593 ವಿಮಾನಗಳು ಹಾರಾಟ ನಡೆಸಿವೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ 2,424 ವಿಮಾನಗಳು ಆಗಮಿಸಿದ್ದು, 92,073 ಪ್ರಯಣಿಕರು ಆಗಮಿಸಿದ್ದಾರೆ. 634 ವಿಮಾನಗಳು ಅಕ್ಟೋಬರ್ ತಿಂಗಳಿನಲ್ಲಿ ಬಂದಿವೆ.

ಏಪ್ರಿಲ್‌ನಿಂದ ಅಕ್ಟೋಬರ್ ತನಕ ಕಲಬುರಗಿ ಮೂಲಕ 92,073,ಮೈಸೂರು ಮೂಲಕ 20,366 , ಹುಬ್ಬಳ್ಳಿ ಮೂಲಕ 17,689,ಬಳ್ಳಾರಿ ಮೂಲಕ 9,315 ,ಬೀದರ್ ಮೂಲಕ 5,614 ಪ್ರಯಾಣಿಕರು ಪ್ರಯಾಣಿಸಿದ್ದರೆ,ಕಲಬುರಗಿಗೆ 626, ಮೈಸೂರಿಗೆ 1,464, ಹುಬ್ಬಳ್ಳಿಗೆ 484, ಬಳ್ಳಾರಿಗೆ 324 , ಬೀದರ್‌ಗೆ 158 ವಿಮಾನಗಳು ಆಗಮಿಸಿವೆ.

ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

 

Advertisement
web