ಪ್ರೇಮ್ ರಾಜ್ ಆರ್ಲಪದವು ಒಂದು ಪರಿಚಯ..
ಇಲ್ಲಿ ಬಲ್ಲವರೇ..ಎಲ್ಲ..
ಆದರೆ-
ಬಲ್ಲವರಿದ್ದರೂ ಹೇಳೋದಿಲ್ಲ..
ಗುರುತಿಸುವವರೇ ಇಲ್ಲ..!!!
ಹೌದು ಕಲೆ ಕಲಾವಿದರೆಂದರೆ ಹಾಗೇನೇ …ತಮ್ಮ ಪ್ರತಿಭೆ ಸಾಧನೆಗಳನ್ನು ತಾವಾಗಿಯೇ ಹೇಳಿಕೊಂಡು ಹೋಗೋದಿಲ್ಲ.ಕಲೆ-ಕಲಾವಿದರನ್ನು ಗುರುತಿಸಿ , ಅವರನ್ನು ಬೆಳಕಿಗೆ ತರುವ ಕೆಲಸನಡೆದಾಗಲೇ ಸಾಮಾಜಿಕ ಸ್ವಾಸ್ಥ್ಯ ನೆಲೆಗೊಳ್ಳುವುದು.ಬಹುಜನರಿರುವ ನಮ್ಮ ರಾಷ್ಟ್ರದಲ್ಲಿ ಅಗಣಿತ ತಾರಾಗಣಗಳಿವೆ.ದೀಪದಿಂದ ದೀಪ ಬೆಳಗಿಸುವಂತೆ ನಾವೂ ಯಾಕೆ ಆ ಕಾರ್ಯ ಮಾಡಬಾರದು.ಕೋಟಿಕೋಟಿ ತಾರಾಗಣ ಬಹುಮುಖ ಪ್ರತಿಭೆಗಳಲ್ಲಿ-‘ನನಗೇನೂ ತಿಳಿದಿಲ್ಲ ಸರ್…’ಎಂದು ಹೇಳುತ್ತಲೇ ಪ್ರಚಾರ ಬಯಸದ ಓರ್ವ ಬಹುಮುಖ ಪ್ರತಿಭೆ ಗಡಿನಾಡು ಪ್ರದೇಶ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರೇಮ್ ರಾಜ್ ಆರ್ಲಪದವು. ಶಿವರಾಮ್,ಶುಭಲಕ್ಷ್ಮಿಯವರ ಸುಪುತ್ರ ಪ್ರೇಮ್ ತನ್ನ ಹುಟ್ಟೂರಿನ ಪಾಣಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು.

Advertisement


ಶಾಲಾಜೀವನದಲ್ಲಿಯೇ ಚಿತ್ರಕಲಾಸಕ್ತಿ ಹೊಂದಿದ್ದ ಪ್ರೇಮ್ ರಾಜ್ ತನ್ನ ಭಾವನೆಗಳಿಗೆ ಸುಂದರ ರೂಪ ಕೊಡುವ ಕನಸು ಕಂಡುಕೊಂಡವರು.ಶಾಲಾ ಕಲಿಕೆಯನಂತರ ಬದುಕು ಕಟ್ಟಿಕೊಳ್ಳಲು ಚಾಲಕ ವೃತ್ತಿ ಆರಿಸಿಕೊಂಡು ಬಾಳ ರಥ ಮುನ್ನಡೆಸಿದರು.ಆ ದಿನಗಳಲ್ಲಿ ಯಕ್ಷಗಾನ,ನಾಟಕ,ಸಂಗೀತ,ನೃತ್ಯಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಪ್ರೇಮ್ ರಾಜ್ ಅವರೊಳಗಿನ ಕಲಾಸಕ್ತಿ ಚಿಗುರೊಡೆಯಿತು.ಸೃಜನಶೀಲತೆ ಜಾಗ್ರತಗೊಂಡಿತು. ಯಕ್ಷಗಾನದ ಮುಖವರ್ಣಿಕೆಗಳು,ನಾಟಕದ ಮೇಕಪ್ ಗಳನ್ನೆಲ್ಲ ಕುತೂಹಲದಿಂದ ವೀಕ್ಷಿಸುತ್ತಿದ್ದ ಪ್ರೇಮ್ -“ನಾನೂ ಯಾಕೆ ಒಬ್ಬ ಭಿನ್ನ ಮೇಕಪ್ ಕಲಾವಿದನಾಗಬಾರದು…??”ಎಂದು ತನಗೆ ತಾನೆ ಪ್ರಶ್ನೆ ಹಾಕಿಕೊಂಡು ಕಾರ್ಯಪ್ರವೃತ್ತರಾದರು.ತನ್ನ ಸಾಧನೆಯ ಹಿಂದಿರುವ ಶ್ರೇಷ್ಠ ನಾಟಕ ರಂಗ ಕಲಾವಿದರಾಗಿರುವ ದೀಪಕ್ ರೈ ಪಾಣಾಜೆಯವರನ್ನು ಕಲಾಗುರುವಾಗಿ ಸ್ವೀಕರಿಸಿ ಮುಂದೆ ಹೆಜ್ಜೆಯಿಟ್ಟರು.ಅವರಿಂದ ರಂಗಭೂಮಿ,ಭರತನಾಟ್ಯ,ಹಾಗೂ ಯಕ್ಷಗಾನದ ಮೇಕಪ್ಪನ್ನು ಕಲಿತು ಶ್ರೇಷ್ಠ ಪ್ರಸಾಧನ ಕಲಾವಿದರಾಗಿ ಗುರುತಿಸಿಕೊಂಡರು.


2008ರ ಸಮಯ ಬೆಂಗಳೂರಿನಲ್ಲಿ ಚಾಲಕರಾಗಿದ್ದಾಗ ಚಿತ್ರರಂಗದ ಮೇಕಪ್ ಅನ್ನು ಕರಗತ ಮಾಡಿಕೊಂಡರು.ಆವಾಗ ಅಚಾನಕ್ ಪರಿಚಯವಾದ ಮೇಕಪ್ ಕಲಾವಿದರೊಬ್ಬರ ಮೂಲಕ ಇನ್ನೂ ಹೆಚ್ಚಿನ ವಿಷಯಗಳನ್ನು ಕಲಿತ ಪ್ರೇಮ್ ,ವೃತ್ತಿಯ ಜೊತೆಗೆ ವಿರಾಮದ ವೇಳೆಯಲ್ಲಿ ಅವರ ಜೊತೆ ಸಿನಿಮಾ ಸೆಟ್ಟ್ ಗೆ ಹೋಗಿ ಅವರ ಕೆಲಸ ಕೈಚಳಕ ನೋಡಿ ತುಂಬಾ ಪ್ರಭಾವಿತರಾಗಿ ತನ್ನ ಬದುಕಿಗೆ ಬಣ್ಣದ ರೆಕ್ಕೆ ಕಟ್ಟತೊಡಗಿದರು.ಅಂತು ಎಂಬ ಕೊಂಕಣಿ ಚಲನ ಚಿತ್ರದ ಪ್ರಧಾನ ಮೇಕಪ್ ಕಲಾವಿದನಾಗಿ ಬೆಳಕಿಗೆ ಬಂದ ಪ್ರೇಮ್ ರಾಜ್ ಆ ಚಿತ್ರದ ನಿರ್ದೇಶಕರಾದ ಅಕ್ಷಯ್ ನಾಯಕ್ ಅವರ ಧೈರ್ಯದ ಮಾತು ಪ್ರೋತ್ಸಾಹದಿಂದ ಇಂದು ಓರ್ವ ಸೃಜನಶೀಲ ಸಂಪೂರ್ಣ ಪ್ರಸಾಧನ ಕಲಾವಿದರಾಗಿ ಜನಮನ್ನಣೆಗೆ ಪಾತ್ರರಾಗಿರುವರು.ಆದರೆ ಎಲ್ಲೂ ತಾನೊಬ್ಬ ದೊಡ್ಡ ಕಲಾವಿದ ಎಂದು ತೋರಿಸಿಕೊಳ್ಳದ ಅವರ ಸಹೃದಯತೆಯೇ ಯಶಸ್ಸಿಗೆ ಏಣಿಯಾಗಿದೆ.


ಅದೆಷ್ಟೋ ಕಿರಿಯ ಪ್ರತಿಭೆಗಳನ್ನು ಗುರುತಿಸಿ ಪ್ರಕಾಶಕ್ಕೆ ತರುವ,ಯುವ-ಹಿರಿಯ ಕಲಾವಿದರೊಂದಿಗೆ ಅವರ ಅಭಿಮಾನಕ್ಕೆ ಪಾತ್ರರಾಗಿರುವ ಪ್ರೇಮ್ ಕಿರುಚಿತ್ರ, ಆಲ್ಬಂ ಸಾಂಗ್,ಭರತನಾಟ್ಯ,ಯಕ್ಷಗಾನ,ಛದ್ಮವೇಷ,ಮೋಡೆಲಿಂಗ್,ಫೊಟೋಶೂಟ್ ಮೊದಲಾದವುಗಳಲ್ಲಿ ಸದಾ ತನ್ನನ್ನು ತಾನು ತೊಡಗಿಸಿ ಕೊಂಡಿರುವ ಕಲಾ ರಾಜ ಪ್ರೇಮ್ ರಾಜ್ ಆರ್ಲಪದವು.
ಕಿರುಚಿತ್ರ,ಆಲ್ಬಮ್ ಸಾಂಗ್,ಕವರ್ ಡ್ಯಾನ್ಸ್ ಗಳ ನಿರ್ದೇಶಕ ನಿರ್ಮಾಪಕನಾಗಿರುವ ಪ್ರೇಮ್ ಬರಹಗಾರ,ನಟ,ಗೆರಟೆ ಕಲಾವಿದ ವರ್ಲಿ ಕಲಾವಿದರೂ ಹೌದು.ಅನೇಕ ಕನ್ನಡ ತುಳು ಸಿನಿಮಾ ಕಲಾವಿದರ ಪಾತ್ರಗಳಿಗೆ ಬಣ್ಣ ತುಂಬುತ್ತಿರುವ ಪ್ರೇಮ್ ರಾಜ್,ಸುಳಿಯೊಳಗೆ,ಪಾಂಚಜನ್ಯ,ಮಂಜರಿ,ನಿಸ್ವಾರ್ಥ,ಸುಜಲಾಂ,ಸ್ವಭಾವ,ಅನಿರೀಕ್ಷಿತ,ರಾಮಕೃಷ್ಣ-ಶಿವ ಕವರ್ ಡ್ಯಾನ್ಸ್ ಮೊದಲಾದವುಗಳ ನಿರ್ದೇಶನ ಮಾಡಿ ಮನೆಮಾತಾಗಿರುವ ಸಹೃದಯಿ ಯುವ ಕಲಾವಿದ ಪ್ರೇಮ್ ರಾಜ್ ಆರ್ಲಪದವು.


ತನ್ನ ಪ್ರತಿಭಾ ಸಾಧನೆಗಳಿಗೆ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ ಪಡೆದಿರುವ ಪ್ರೇಮ್ ಕನ್ನಡ ತುಳು ಕೊಂಕಣಿ ಮಲೆಯಾಳಂ ಕೊಡಗು ಭಾಷೆಗಳ ಸುಮಾರು ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೇಕಪ್ ಕಲಾವಿದರಾಗಿ ಕೆಲಸ ಮಾಡಿದ ಅನುಭವ ಹೊಂದಿದ ಪ್ರತಿಭಾವಂತ ಕಲಾವಿದ.
ಸಿನಿಮಾ ಟೈಟಲ್ ಡಿಸೈನ್,ಲೋಗೋ ಡಿಸೈನ್ ,ವಾಲ್ ಪೈಂಟಿಂಗ್,ಬ್ಯಾನರ್ ಡಿಸೈನರ್ ಕಲಾವಿದರೂ ಆಗಿರುವ ಪ್ರೇಮ್ ರಾಜ್ ಮಕ್ಕಳ ಪ್ರತಿಭಾ ವಿಕಾಸಕ್ಕೆ ಯಾವುದೇ ಸ್ವಾರ್ಥವಿಲ್ಲದೆ ಕಲಾತಾರೆಗಳನ್ನು ಬೆಳಗಿಸುವ ನಮ್ಮ ನಡುವಿನ ಯುವ ಕಲಾತಾರೆ. ಪ್ರೇಮ್ ಅವರ ಕಲಾ ಕೌಟುಂಬಿಕ ಬದುಕು ನಮಗೆಲ್ಲ ಆದರ್ಶವಾಗಿದೆ.
ಪ್ರೇಮ್ ರಾಜ್ ಆರ್ಲಪದವು ಅವರ ಪ್ರತಿಭೆ ಸಾಧನೆಗಳ ಗುರುತಿಸಿ ಸರಕಾರ-ಇಲಾಖೆಗಳು ಜಿಲ್ಲೆ,ರಾಜ್ಯ,ರಾಷ್ಟ್ರ ಮಟ್ಟದ ಪುರಸ್ಕಾರ ನೀಡಿ ಕಲೆ-ಕಲಾವಿದನ ಬಾಳ ಬೆಳಗಿಸಲೆಂದು ನಾವು ಹಾರೈಸೋಣ.

nrkಬರಹ:ನಾರಾಯಣ ರೈ ಕುಕ್ಕುವಳ್ಳಿ.

Advertisement
web