ಉಪ್ಪೂರು :ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ್ಪೂರು ಡೈರಿಗೆ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರು ಮತ್ತು ಸಹಕಾರ ಭಾರತೀಯ ರಾಷ್ಟ್ರೀಯ ಸಲಹೆಗಾರರಾದ ಸನ್ಮಾನ್ಯ ಶ್ರೀ ಸತೀಶ್ ಮರಾಠೆ ಯವರು ಜನವರಿ 10 ,ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ಕುಟುಂಬ ಸದಸ್ಯರ ಜೊತೆಗೆ ಭೇಟಿ ನೀಡಿದರು.ನಂದಿನಿ ಹಾಲು ಸಂಸ್ಕರಣೆ ಮತ್ತು ನಂದಿನಿ ಉತ್ಪನ್ನಗಳ ತಯಾರಿಕಾ ವಿಭಾಗಗಳನ್ನು ಸಂದರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗಡೆ ಯವರು ಸನ್ಮಾನ್ಯ ಶ್ರೀ ಸತೀಶ್ ಮರಾಠೆಯವರಿಗೆ ಮಲ್ಲಿಗೆ ಹೂವಿನ ಹಾರಾರ್ಪಣೆ ಮೂಲಕ ಸ್ವಾಗತಿಸಿದರು.
ದೇಶದಲ್ಲಿ ಡೈರಿ ಉದ್ಯಮದ ಮುಂದಿರುವ ಸವಾಲುಗಳು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಲ್ಪನೆಯ “ಆತ್ಮ ನಿರ್ಭರ ಭಾರತದ” ವಿವಿಧ ಯೋಜನೆಗಳಿಂದ ಡೈರಿ ಉದ್ಯಮದ ವಿಸ್ತರಣೆ ಮತ್ತು ವ್ಯವಹಾರ ವೃದ್ಧಿಗೆ ಇರುವ ಅವಕಾಶಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರಾದ ಮತ್ತು ಸಹಕಾರ ಭಾರತೀಯ ರಾಷ್ಟ್ರೀಯ ಸಲಹೆಗಾರರಾದ ಶ್ರೀ ಸತೀಶ್ ಕಾಶಿನಾಥ ಮರಾಠೆ ಯವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಭಾರತದ ಪ್ರಸ್ತುತ ಆರ್ಥಿಕ ಸ್ಥಿತಿ ಗತಿಗಳು, ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾದ ಅವಶ್ಯಕತೆಗಳು, ಪ್ರಸ್ತುತ ಡೈರಿ ಉದ್ಯಮವು ಎದುರಿಸುತ್ತಿರುವ ಸವಾಲುಗಳು ಮತ್ತು ಆತ್ಮ ನಿರ್ಭರ ಭಾರತದ ವಿವಿಧ ಯೋಜನೆಗಳ ಮೂಲಕ ಡೈರಿ ಉದ್ಯಮವನ್ನು ಇನ್ನಷ್ಟು ಸದೃಢಗೊಳಿಸಿ, ವಿಸ್ತರಣೆ ಮಾಡಿ, ಮೌಲ್ಯವರ್ಧನೆ ಮಾಡಲು ಇರುವ ಅವಕಾಶಗಳ ಬಗ್ಗೆ ಅಂಕಿ-ಅಂಶಗಳ ಮೂಲಕ ವಿವರಿಸಿದರು.
ದೇಶದ ವಿವಿಧ ರಾಜ್ಯಗಳಿಗೆ ಮತ್ತು ಹೊರ ದೇಶಗಳಿಗೆ ಡೈರಿ ಉತ್ಪನ್ನಗಳನ್ನು ರಫ್ತು ಮಾಡಲು ಇರುವ ಕಾನೂನು ತೊಡಕುಗಳನ್ನು ಮತ್ತು ರಾಜ್ಯ ಮತ್ತು ಕೇಂದ್ರ ಸರಕಾರಗಳು ತೆಗೆದುಕೊಳ್ಳಬೇಕಾದ ಪ್ರೋತ್ಸಾಹಕ ಉಪಕ್ರಮಗಳ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ರಿಸರ್ವ್ ಬ್ಯಾಂಕಿನ ಮೂಲಕ ಸಲಹೆ-ಸೂಚನೆ, ನಿರ್ದೇಶನಗಳನ್ನು ನೀಡುವುದಾಗಿ ತಿಳಿಸಿದರು.
ಭಾರತದ ನಾಗರಿಕ ಪೂರೈಕೆ ವ್ಯವಸ್ಥೆಯಡಿಯಲ್ಲಿ ( PDS ರೇಷನ್ ಅಂಗಡಿಗಳಲ್ಲಿ) ಅಕ್ಕಿ, ಗೋಧಿ, ಸಕ್ಕರೆ, ಉಪ್ಪು, ಬೇಳೆ- ಕಾಳುಗಳು ಮತ್ತು ಖಾದ್ಯ ತೈಲದ ಜೊತೆಗೆ ಹಾಲು ಅಥವಾ ಹಾಲಿನ ಪುಡಿಯನ್ನು ಕೂಡ ಸೇರಿಸಿ ನೀಡುವುದರಿಂದ ಹೈನುಗಾರರು ಉತ್ಪಾದಿಸುವ ಹಾಲಿಗೆ ಇನ್ನಷ್ಟು ಹೆಚ್ಚಿನ ಬೆಲೆ ಯು ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಡೈರಿ ಉದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಬಲ ಮತ್ತು ಆರ್ಥಿಕ ಚೈತನ್ಯ ನೀಡಿದಂತಾಗುತ್ತದೆ.
ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ಅಂಕಿ-ಅಂಶಗಳ ಮೂಲಕ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಕಾರ್ಯಚಟುವಟಿಕೆಗಳು, ಸಾಧನೆಗಳು, ಮತ್ತು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿಯವರು ಶ್ರೀ ಸತೀಶ್ ಕಾಶಿನಾಥ್ ಮರಾಠೆ ಯವರ ವ್ಯಕ್ತಿ ಪರಿಚಯವನ್ನು ಮಾಡಿ, ಸ್ವಾಗತಿಸಿದರು.
ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ಶ್ರೀ ಸತೀಶ್ ಕಾಶಿನಾಥ್ ಮರಾಠೆ ಯವರ ವಿಶೇಷ ಉಪನ್ಯಾಸದ ಪ್ರಮುಖ ಅಂಶಗಳನ್ನು ಕನ್ನಡ ಭಾಷೆಯಲ್ಲಿ ಸಭೆಗೆ ವಿವರಿಸಿದರು. ನಿರ್ದೇಶಕರಾದ ಶ್ರೀ ಡಿ. ಗೋಪಾಲಕೃಷ್ಣ ಕಾಮತ್ ರವರು ಧನ್ಯವಾದ ಸಮರ್ಪಣೆ ಗೈದರು. ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಡಾ. ರವಿರಾಜ ಉಡುಪ ರವರು ಕಾರ್ಯಕ್ರಮ ನಿರೂಪಿಸಿದರು
ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಉಪ್ಪೂರು ನಂದಿನಿ ಹಾಲಿನ ಡೈರಿಗೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರು ಮತ್ತು ಸಹಕಾರ ಭಾರತಿಯ ರಾಷ್ಟ್ರೀಯ ಸಲಹೆಗಾರರಾದ ಶ್ರೀ ಸತೀಶ್ ಕಾಶಿನಾಥ್ ಮರಾಠೆ ಯವರಿಗೆ ಶಾಲುಹೊದಿಸಿ, ಹಾರಾರ್ಪಣೆ ಗೈದು, ಹಸು ಮತ್ತು ಕರುವಿನ ನಂದಿನಿ ವಿಶೇಷ ಸ್ಮರಣಿಕೆ, ಹಣ್ಣು-ಹಂಪಲುಗಳು, ನಂದಿನಿ ವಿಶೇಷ ಸಿಹಿ ಉತ್ಪನ್ನಗಳನ್ನು ನೀಡಿ ಗೌರವಿಸಿ ಸತ್ಕರಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕರಾದ ಶ್ರೀ ಸತೀಶ್ ಕಾಶಿನಾಥ ಮರಾಠೆಯವರು ತಮ್ಮ ಕುಟುಂಬ ಸದಸ್ಯರ ಜೊತೆಗೆ ,ನಂದಿನಿ ಡೈರಿ ಗೆ ಭೇಟಿ ನೀಡಿದ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೊಡವೂರು ರವಿರಾಜ ಹೆಗಡೆ, ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರುಗಳಾದ ಶ್ರೀ ಜಗದೀಶ ಕಾರಂತ್, ಶ್ರೀ ಡಿ. ಗೋಪಾಲಕೃಷ್ಣ ಕಾಮತ್, ಶ್ರೀ ಸಾಣೂರು ನರಸಿಂಹ ಕಾಮತ್, ಶ್ರೀ ಮುಡಾರು ಸುಧಾಕರ ಶೆಟ್ಟಿ, ಮಾಜಿ ನಿರ್ದೇಶಕರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಒಕ್ಕೂಟದ ಮ್ಯಾನೇಜರ್ ಡಾ. ನಿತ್ಯಾನಂದ ಭಕ್ತ,ಉಪ್ಪೂರು ಡೈರಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ರವಿರಾಜ್ ಉಡುಪ,ಸಮೀಪದ ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾದ ಶ್ರೀ ಭಾಸ್ಕರ್ ಶೆಟ್ಟಿ, ನಿರ್ದೇಶಕರುಗಳು, ಹೈನುಗಾರ ಸದಸ್ಯರು ಮತ್ತು ಉಪ್ಪೂರು ಡೈರಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು
Advertisement
web

Advertisement