ಭವ್ಯವಾದ ಭಾರತ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಮಾನವ ಸಂಪತ್ತು ಅಭಿವೃದ್ಧಿ ಹೊಂದಲು ಸಾಧ್ಯ.
ಮಾನವ ಎಂದರೆ, ತಿಳುವಳಿಕೆ ಉಳ್ಳವ. ಆತ ತನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಶಿಕ್ಷಣವೆಂದರೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರುವಂಥದ್ದು. ಶಿಕ್ಷಕರು ಶಾಲೆಗಳಲ್ಲಿ ತಮ್ಮ ಪಾಠದ ಅವಧಿಯಲ್ಲಿ ಕೆಲವು ನಿಮಿಷಗಳಾದರೂ ಕನಿಷ್ಠ ಕೆಲವು ಮೌಲ್ಯಗಳನ್ನು ಮಕ್ಕಳಿಗೆ ತಿಳಿಯಪಡಿಸಿದಾಗ ಖಂಡಿತ ನಮ್ಮ ಭಾರತ ದೇಶವು ಮಿನುಗಲು ಸಾಧ್ಯ.
ಮಕ್ಕಳಲ್ಲಿ ಅಪಾರವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಚಿಕ್ಕಂದಿನಿಂದಲೇ ಹೊರ ತರಲು ಪೋಷಕರು ನೆರವಾಗಬೇಕು. ಮಕ್ಕಳ ಆಸಕ್ತಿ ಅನುಗುಣವಾಗಿರುವ ಕಲೆಗೆ ಹೆಚ್ಚು ಪ್ರೋತ್ಸಾಹಿಸಬೇಕು. ಯಾವುದೇ ವಿದ್ಯೆಯನ್ನು ಬಲವಂತವಾಗಿ ಮಕ್ಕಳ ಹೇರಲು ಮುಂದಾಗಬಾರದು.
15 ವರ್ಷದ ಒಳಗಿನ ಮಕ್ಕಳನ್ನು ಪೋಷಕರು ಚಿಕ್ಕ ವಯಸ್ಸಿನಲ್ಲೇ ಸರಿಯಾಗಿ ತಿದ್ದಿ ಬೆಳೆಸಬೇಕು. ಸಂಗೀತ, ನೃತ್ಯ, ಕ್ರೀಡೆ, ಸಾಹಿತ್ಯಾತ್ಮಕ ಚಟುವಟಿಕೆಗಳು ಮಕ್ಕಳ ಜ್ಞಾನ ವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಿವೆ. ಎಲ್ಲಿ ಬೇಕಾದರೂ ಶಿಕ್ಷಣ ಕಳಿಸಬಹುದು ಆದರೆ, ಮಾನವೀಯ ಮೌಲ್ಯಗಳನ್ನು ಕಲಿಸುವವರು ವಿರಳ.
ಆದುದರಿಂದ, ಪೋಷಕರು ಹಾಗೂ ಶಿಕ್ಷಕರು ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳಿಗೆ ಪ್ರಮುಖ ಒತ್ತು ನೀಡಬೇಕು.
ಪ್ರಸ್ತುತ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ನಮ್ಮ ಜನರು ಹೇಳುವುದು, ನಾಗರೀಕತೆ ಬೆಳೆಯುತ್ತ ಮನುಷ್ಯ ತನ್ನ ಮಾನವೀಯ ಗುಣಗಳನ್ನು ಗಾಳಿಗೆ ತೂರುತ್ತಿದ್ದಾನೆ. ಭಾವನೆಗಳು ನಶಿಸುತ್ತವೆ, ಕರ್ತವ್ಯವನ್ನು ಮರೆತು ಯಾಂತ್ರಿಕ ಜೀವನ ನಡೆಸುತ್ತಿದ್ದಾನೆ ಎಂದು. ಆದರೆ, ನಮ್ಮ ಸುತ್ತಲೂ ನಡೆಯುವ ಸಂಗತಿಗಳನ್ನು ಗಮನಿಸಿದಾಗ ಮಾತ್ರ
ನಮಗೆ ಸತ್ಯದ ಅರಿವಾಗುತ್ತದೆ.
ನಾವು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಜನರು ಬದಲಾಗುತ್ತಿರುವರೆಂಬುದು ಸರಿಯೇ? ಯಾವ ಮಾನವೀಯ ಮೌಲ್ಯಗಳು ಕಳೆದು ಹೋಗಿಲ್ಲ. ಅದನ್ನು ನೋಡಲು ಬೇಕಾದ ದೃಷ್ಟಿ ನಮ್ಮಲ್ಲಿ ಇಲ್ಲ. ಮಕ್ಕಳು ತಮ್ಮ ತಂದೆ – ತಾಯಿಯನ್ನು ಸಾಕಲಾರದೆ ಆಶ್ರಮಕ್ಕೆ ಬಿಡುತ್ತಾರೆ, ಇದು ಸಂಬಂಧಗಳು ಕಳಚುವುದಕ್ಕೆ ಉದಾಹರಣೆಯಾದರೆ, ನಮ್ಮ ಸಮಾಜದಲ್ಲಿ ನೊಂದ ತಂದೆ ತಾಯಿಗಳಿಗಾಗಿ ವೃದ್ದಾಶ್ರಮ ನಡೆಸುವವರಲ್ಲಿ ಮಾನವೀಯತೆ ಕಾಣುವುದಿಲ್ಲವೇ? ಅಪಘಾತ ನಡೆದಾಗ ದೂರ ಹೋದವರನ್ನು ಕಂಡರೂ, ಪಕ್ಕದಲ್ಲೇ ಸಹಾಯ ಮಾಡುವವರು ನಮಗೇಕೆ ಕಾಣುವುದಿಲ್ಲ? ಯಾರು ಕರೆಯದೆಯೇ ಸಹಾಯ ಮಾಡುವರು ಇಂದಿಗೂ ಇದ್ದಾರೆ. ಅದರಿಂದ ಶಿಕ್ಷಣದಲ್ಲಿ ಮಾನವೀಯ ಮೌಲ್ಯವು ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ದ್ರಾಕ್ಷಿ ಸಿಗದ ನರಿ ಹಣ್ಣು ಹುಳಿ ಎಂದ ಹಾಗೆ, ಮನದ ಕಣ್ಣು ತೆರೆಯದೆ ನಾಗರಿಕತೆಯನ್ನು ದೂರತಳ್ಳಿ ಹಾಕುವ ನಮ್ಮ ನಿಲುವು ಬದಲಾಗಬೇಕಿದೆ, ಮಾನವೀಯ ಮೌಲ್ಯಗಳನ್ನು ಜೀವಂತವಾಗಿಡುವಲ್ಲಿ ನಮ್ಮ ಪಾತ್ರ ದೊಡ್ಡದಾಗಿದೆ.
ಅದನ್ನರಿತು ಸುಂದರ ಸ್ವಸ್ಥ ಕುಟುಂಬ, ಸಮಾಜ, ನಾಡು, ದೇಶ ಕಟ್ಟುವಲ್ಲಿ ಪ್ರಯತ್ನಿಸೋಣ, ಜೈ ಹಿಂದ್.

Advertisement

– ಸುಪ್ರಿತಾ ಚರಣ್ ಪಾಲಪ್ಪೆ ಮನೆ ಕಡಬ

 

Advertisement
web