ನೀವು ಓದಿದ್ದು…

Advertisement

(ಈರ್ವರು ಆಗಂತುಕರು ಭೀಕರ ಕಾಡಿನಲ್ಲಿ ನಡೆಯುತ್ತಿದ್ದಾರೆ… ಹೇಸ್ಟಿಯಾ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ತನ್ನ ಮಕ್ಕಳನ್ನು ಮಲಗಿಸುತ್ತಾ ಅಡುಗೆ ಮಾಡುವ ತರಾತುರಿಯ ನಡುವೆ ಗಂಡನಿಗೆ ಬೈಯುತ್ತಿದ್ದಾಳೆ, ತಕ್ಷಣಕ್ಕೆ ಭೀಕರ ನರಳಾಟದ ಅರಚಾಟ ಕೇಳಿಸಿತು…ಪ್ಯಾರಿಸ್ ನಗರದ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಜನ ನೆರೆದಿದ್ದಾರೆ…ರಾಜಪರಿವಾರವನ್ನು ಗುರುವು ಸ್ವಾಗತಿಸಿದ್ದಾನೆ..ಎಲ್ಲರೂ ಒಂದು ಫಲಿತಾಂಶಕ್ಕಾಗಿ ಕಾದಿದ್ದಾರೆ.ಹೀಡಿಯಸ್ ಮತ್ತು ಫೀಲಿಯಸ್ ವಿಜಯಿ ಎಂದು ಘೋಷಿಸಿಸಲಾಯಿತು ಅಷ್ಟರಲ್ಲು ಒಂದು ರಥ ವೇಗವಾಗಿ ಬಂದು ನಿಂತಿತು.ಅದರಿಂದಿಳಿದ ಯೊಧ ಹೀಡಿಯಸ್ ನ ಕೊರಳ ಕಡೆ ಕತ್ತಿ ಬೀಸಿದ)

ಇಡೀಯ  ಪ್ರಾಂಗಣವೇ  ಸ್ತಬ್ಧವಾಗಿತ್ತು. ರಾಜನು ಒಂದು ಹೆಜ್ಜೆ ಹಿಂದೆ ಸರಿದ. ವೀಸಲ್  ಕಣ್ಣೆವೆ ಇಕ್ಕದೆ  ಇದನ್ನೆಲ್ಲಾ ಕಾಣುತ್ತಿದ್ದ. ರಾಜಕುಮಾರಿ ಜೋರಾಗಿ  ಚೀರುತ್ತಾ ತನ್ನೆರಡು ಕಣ್ಣುಗಳನ್ನು ಮುಚ್ಚಿಕೊಂಡಳು. ಕ್ಯಾಥೋಸ್ ಒಂದಿನಿತು ಅಲ್ಲಾಡದೆ ಇದೆಲ್ಲವನ್ನೂ ಕಣ್ಣರಳಿಸಿ ನೋಡುತ್ತಿದ್ದ. ಆಗಂತುಕ ಯೋಧನು ಬೀಸಿದ ಕತ್ತಿ ಇನ್ನೇನು ಕತ್ತನ್ನು ಸೀಳಬೇಕೆನ್ನುವಷ್ಟರಲ್ಲಿ, ಕತ್ತಿ ನಿಂತಿತು. ಯೋಧನು ಹೀಡಿಯಸ್ ನ‌ ಕೊರಳ ಬಳಿ ತನ್ನ ಖಡ್ಗವನ್ನು ನಿಲ್ಲಿಸಿದ್ದ.ಆದರೆ ಮುಂದೊತ್ತರಿಸಿ ಬಂದ ಕತ್ತಿಯ ವೇಗ ತಡೆಯಲು ಸಾಧ್ಯವಾಗದ ಕಾರಣದಿಂದಲಾಗಿ..ಕೊರಳ ಗಂಟಲ ಬಳಿ ಸಣ್ಣ ಗಾಯವಾಗಿ,ಅದರಿಂದ ಒಂದು ಹನಿ ರಕ್ತ ತೊಟ್ಟಿಕ್ಕಿತು.
ಇಷ್ಟಾದರೂ ಹೀಡಿಯಸ್ ವಿಚಲಿತನಾಗಿರಲಿಲ್ಲ. ಹೀಡಿಯಸ್ ಆ ಯೋಧನ ಕಡೆಗೊಮ್ಮೆ ಮತ್ತು ಎಡಬದಿಗೆ ನಿಂತಿದ್ದ ಫೀಲಿಯಸ್ ನ ಕಡೆಗೆ ಓರೆ ನೋಟವನ್ನು ಬೀರುತ್ತಾ, ನಸುನಗುತ್ತಾ ಕೇಳಿದ ” ನಿನ್ನ ಪ್ರತಿಭೆ ಇಷ್ಟೇ ಏನೂ…?”
ತಕ್ಷಣದಲ್ಲಿ ಯೋಧ ತಾನು ಬೀಸಿದ ಕತ್ತಿಯ ನುಣುಪಾದ ತುದಿಯನ್ನು ಕಂಡ.ಕತ್ತಿಯ ಮೊನೆಯಿಂದ ಒಂದು ಬಿಂದು ರಕ್ತ ಕತ್ತಿಯ ಹಿಡಿಯತ್ತ ಹರಿಯುತಿತ್ತು.ಒಮ್ಮೆಗೆ ಹೌಹಾರಿ ಕತ್ತಿಯನ್ನು ದೂರಕ್ಕೆಸೆದು,ಆ ಯೋಧ ಹೀಡಿಯಸ್ ನನ್ನು ಬಲವಾಗಿ ಅಪ್ಪಿಕೊಂಡ.
ನೆರೆದವರೆಲ್ಲಾ ಗೊಂದಲಕ್ಕೀಡಾಗಿದ್ದಾರೆ..ರಾಜ ಮೆಗಲಸ್ ಬ್ಯಾಸಿಲಸ್ ಗೆ ಒಂದೂ ಅರ್ಥವಾಗುತ್ತಿಲ್ಲ.ರಾಜ ಕುಮಾರಿ ನಿಧಾನವಾಗಿ ಕಣ್ಣಿನಿಂದ ಕೈ ತೆಗೆದು ಏನಾಯಿತೆಂದು ಭಯದಿಂದ ನೊಡುತ್ತಿದ್ದಾಳೆ‌..ವೀಸಲ್ ತನ್ನ ವಿಚಿತ್ರ ನಗುವಿಗೆ ಸಿಡಿಲು ಬಡಿದಂತೆ ಸ್ತಬ್ದನಾಗಿದ್ದಾನೆ.
ಹೀಡಿಯಸ್ ನಿಧಾನವಾಗಿ ಯೋಧನ ಉಭಯ ಭುಜಗಳನ್ನು ತನ್ನ ಎರಡೂ ಕೈಗಳಿಂದ ಒತ್ತಿ ಹಿಡಿದು, ನಂತರ ಯೋಧನ ಶಿರಸ್ತ್ರಾಣವನ್ನು ತೆಗೆಯುತ್ತಾ, ” ಗೆಳೆಯಾ ನನ್ನನ್ನು ಕೊಂದೇ ಬಿಡುತ್ತಿದ್ದೆ ಅಲ್ವೇ?!..”ಎಂದ
ಶಿರಾಸ್ತ್ರಾಣ ಯೋಧನ ತಲೆಯಿಂದ ಸರಿಯುತ್ತಲೇ,ಇದೆಲ್ಲವನ್ನು ತದೇಕ ಚಿತ್ತದಿಂದ ಗಮನಿಸುತ್ತಿದ್ದ ಉಮೈಲ್ ವೀಸಲ್ , ” ಆಗ್ನೇಸ್..!!” ಎಂದು ತಡಬಡಿಸಿದ…ತಕ್ಷಣಕ್ಕೆ ಸಹಿಸಲಾರದ ಕೋಪ ಆತನಲ್ಲಿ ಉಕ್ಕೇರಿತು.ಸಿಟ್ಟಿನಲ್ಲಿ ಕಡಿದ ಹಲ್ಲು ಮರಳು ಹುರಿದಂತೆ ಕೇಳುತ್ತಿತ್ತು..ಮುಷ್ಠಿ ಬಿಗಿಗೊಂಡಿತು…
ಇತ್ತ ಯೋಧ ಕಣ್ಣುಗಳಲ್ಲಿ ನೀರಿಡುತ್ತಾ…”ಹೀಡಿಯಸ್,…ಗೆಳೆಯಾ, ನೋವಾಯಿತೆ, ನಾನು ತಮಾಷೆಗೆಂದು ಹೀಗೆ ಮಾಡಿದೆ..ಅಯ್ಯೋ.” ಎಂದಾಗ ಆತನನ್ನು ಹೀಡಿಯಸ್ ಮುಗುಳ್ನಗೆಯಿಂದ ಸಮಾಧಾನಿಸುತ್ತಾ ” ಹೇಯ್!. ನೀನ್ಯಾಕೆ ಇಷ್ಟೊಂದು ಭಾವುಕನಾಗುತ್ತಿದ್ದಿ?ಮಹಾ ಯೋಧ ‘ಆಗ್ನೇಸ್’, ಈ ರೀತಿ ಭಾವುಕನೇ!…”ಎಂದ.ಆಗ್ನೇಸ್ ತನ್ನ ಕಣ್ಣೀರನ್ನು ಒರೆಸುತ್ತಾ” ಸಾಕು, ಗೇಲಿ ಮಾಡಬೇಡ…ನಾನು ಯೋಧನೇ?, ಅದೂ ನಿನ್ನೆದುರು.ಪರಮ ವಿಕ್ರಮಿ ಹೀಡಿಯಸ್ ನ ಎದುರು ಜಗತ್ತಿನಲ್ಲಿ ಎಲ್ಲರೂ ಹುಲ್ಲುಕಡ್ಡಿಗೆ ಸಮ” ಎಂದಾಗ ಹೀಡಿಯಸ್, ಫೀಲಿಯಸ್ ನ ಕಡೆ ಕೈ ತೋರುತ್ತಾ “ಅದೋ ಅಲ್ಲಿ ನನಗಿಂತ ವಿಕ್ರಮಿ ಯೋಧ…ನನ್ನ ತಮ್ಮ” ಎಂದನು…ಆಗ್ನೇಸ್ ಇವರಿಬ್ಬರ ಪ್ರೀತಿಯನ್ನು ಕಂಡು, ತಮಾಷೆಯಿಂದ, ತೋರಿಕೆಯ ಅಸೂಯೆ ಪ್ರದರ್ಶಿಸುತ್ತಾ “ನಿಮ್ಮಿಬ್ಬರ ಮಧ್ಯೆ ನನಗೆ ಜಾಗ ಇದೆಯೋ?” ಎಂದಾಗ ಹೀಡಿಯಸ್ ತನ್ನ ಹೃದಯದತ್ತ ಕೈ ತೋರಿಸುತ್ತಾ “ಇಗೋ ಇಲ್ಲಿ” ಎನ್ನುತ್ತಾ ಆಗ್ನೇಸ್ ನನ್ನು ಅಪ್ಪಿದ…ಅದನ್ನು ಕಂಡು ದೂರದಲ್ಲಿ ನಿಂತಿದ್ದ ಫೀಲಿಯಸ್ ಓಡಿಬಂದು “ಈಗ ನಿಮ್ಮಿಬ್ಬರ ನಡುವೆ ನನಗೆ ಜಾಗವಿದೆಯೇ..?” ಎಂದು ಜೋರಾಗಿ ನಗುತ್ತಾ ಅವರ ಜೊತೆ ಸೇರಿಕೊಂಡ…ಸುತ್ತಲಿನ ಕ್ರೀಡಾಂಗಣ ಇದಕ್ಕೆ ಸಾಕ್ಷಿಯಾಗುತ್ತಾ ” ಹೋ” ಎಂದು ಬೊಬ್ಬಿರಿಯಿತು…ಇದನ್ನು ಕಾಣುತ್ತಿದ್ದ ಗುರು ಗ್ಯಾಲನ್ ಕ್ಯಾಥೋಸ್ ರಾಜನ ಕಡೆ ನೋಡುತ್ತಾ “ನನ್ನ ಶಿಷ್ಯರು” ಎಂದು ಹೆಮ್ಮೆಯಿಂದ ಹೇಳಿ ನಕ್ಕ. ಇದಕ್ಕೆ ರಾಜ ಪ್ರತಿಕ್ರಿಯಿಸುತ್ತಾ ” ಬರೀಯ ಪರಾಕ್ರಮಿಗಳಲ್ಲ…ಜೊತೆಗೆ ಶುದ್ಧ ತಲೆಹರಟೆಗಳೂ ಹೌದು” ಎನ್ನುತ್ತಾ ನಗತೊಡಗಿದ…ರಾಜಕುಮಾರಿ ತುಂಬು ಹರ್ಷದಿಂದ, ಅಲ್ಲಿಂದಲೇ ಆಗ್ನೆಸ್ ನ ಕಡೆ ಕೈ ಬೀಸಿದಳು…ಇದನ್ನು ಕಂಡ ಆಗ್ನೆಸ್, ಉತ್ತರವಾಗಿ ತಾನೂ ಕೈ ಬೀಸಿದ.ಇದನ್ನು ಕಂಡ ಫೀಲಿಯಸ್ ,ಆಗ್ನೇಸ್ ನನ್ನು ಛೇಡಿಸುತ್ತಾ ” ಓಹೋ…ಮಂತ್ರಿ ಮಗನು ರಾಜನಾಗಲು ಹೊರಟಂತಿದೆ” ಎಂದು ನಕ್ಕ.ಇದಕ್ಕೆ ಆಗ್ನೇಸ್ ” ರಾಜ ಕುಮಾರಿಯ ಕುರಿತು ನನಗಿರುವ ಭಾವನೆ ವಿಶೇಷ, ನಿಮಗದು ಅರ್ಥವಾಗದು” ಎಂದ.ಹಿಡಿಯಸ್ ಮತ್ತು ಫೀಲಿಯಸ್ ಆಗ್ನೇಸ್ ನನ್ನು ತಮಾಷೆಯ ದೃಷ್ಟಿಯಿಂದ ಕಾಣುತ್ತಾ ಅಣಕಿಸಿದರು….ಅಷ್ಟರಲ್ಲಿ ಪಂಥದಲ್ಲಿ ಪಾಲ್ಗೊಂಡ ಸರ್ವ ಯೋಧರ ಆಗಮನವಾಗಿತ್ತು .ಎಲ್ಲರೂ ಬಂದು ಅವಳಿ ಸಹೋದರ ವೀರರನ್ನು ಅಭಿನಂದಿಸುತ್ತಿದ್ದರು.ಆದರೆ….
ದೂರದಲ್ಲಿ,ಕ್ರೀಡಾಂಗಣದ ದ್ವಾರದ ಬಳಿ ಕುದುರೆಯೊಂದು ಬಂದು‌ ನಿಂತಿದೆ…ಅದರಲ್ಲಿ ಬೃಹತ್ ಕಾಯದ ವ್ಯಕ್ತಿಯೋರ್ವ ಕುಳಿತಿದ್ದಾನೆ… ಕಪ್ಪಗಿನ ಕಂಬಳಿ ಇಡಿಯ ದೇಹವನ್ನಾವರಿಸಿದೆ. ಕಣ್ಣುಮಾತ್ರವೇ ಕಾಣುವಂತೆ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದಾನೆ. ಆದರೆ ಆತನ ಕರ್ರಗಿನ ಕಾಲು ಆತ ಕಪ್ಪು ವರ್ಣೀಯ ಎಂಬುದನ್ನು ಸಾಬೀತು ಪಡಿಸುತ್ತಿತ್ತು. ಮೊಣಕಾಲಿನಿಂದ ರಕ್ತ ಸೋರಿ ಹಿಮ್ಮಡಿಯಿಂದ ತೊಟ್ಟು ತೊಟ್ಟಾಗಿ ನೆಲಕ್ಕೆ ಬೀಳುತ್ತಿತ್ತು..ಕುದುರೆಯ ಜೀನನ್ನು ಹಿಡಿದಿದ್ದ ಬಲಿಷ್ಠ ಕೈಗಳಲ್ಲಿ ಹಾಗು ಉಕ್ಕನ್ನು ಹೋಲುವ ತೋಳುಗಳಲ್ಲಿ ತರಚಿದ ಗಾಯಗಳಾಗಿವೆ…ಒಮ್ಮೆ ಗೆದ್ದ ವೀರರತ್ತ ನೋಟಹರಿಸಿ, ಕುದುರೆಯನ್ನು ನಿಧಾನಕ್ಕೆ ತಿರುಗಿಸಿ,ಅಲ್ಲಿಂದ ನಾಗಾಲೋಟದಿಂದ ತೆರಳಿದ…ಯಾರಿಗೂ ಕಾಣದ ಈ ವ್ಯಕ್ತಿಯನ್ನು ಫೀಲಿಯಸ್ ಕಂಡ..ತಕ್ಷಣ ತನ್ನ ಸುತ್ತ ತನ್ನನ್ನು ಹಾಗು ಅಣ್ಣನನ್ನು ಆಭಿನಂದಿಸಲು ಬಂದಿದ್ದ ಯೋಧರ ಗುಂಪನ್ನು ಬಹಳ ತ್ರಾಸದಿಂದ ನಿವಾರಿಸುತ್ತಾ ಮಹಾದ್ವಾರದತ್ತ ಓಡಿದ….ತುಂಬಿದ ಕ್ರೀಡಾಂಗಣವಾಗಲಿ,ರಾಜಪರಿವಾರವಾಗಲಿ, ಹೀಡಿಯಸ್ ಆಗಲಿ,ಆಗ್ನೇಸ್ ಆಗಲಿ.. ಯಾರು ಫೀಲಿಯಸ್ ನ ಕಡೆ ಗಮನ ಹರಿಸಲೇ ಇಲ್ಲ…..

(ಮುಂದುವರೆಯುವುದು)

Advertisement
web