ಸುಂದರತೆಯ ಒಳಗೊಂದು ಭೀಕರತೆ

Advertisement

 

ನೀವು ಓದಿದ್ದು…(ಈರ್ವರು ಆಗಂತುಕರು ಭೀಕರ ಕಾಡಿನಲ್ಲಿ ನಡೆಯುತ್ತಿದ್ದಾರೆ… ಹೇಸ್ಟಿಯಾ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ತನ್ನ ಮಕ್ಕಳನ್ನು ಮಲಗಿಸುತ್ತಾ ಅಡುಗೆ ಮಾಡುವ ತರಾತುರಿಯ ನಡುವೆ ಗಂಡನಿಗೆ ಬೈಯುತ್ತಿದ್ದಾಳೆ, ತಕ್ಷಣಕ್ಕೆ ಭೀಕರ ನರಳಾಟದ ಅರಚಾಟ ಕೇಳಿಸಿತು…ಪ್ಯಾರಿಸ್ ನಗರದ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಜನ ನೆರೆದಿದ್ದಾರೆ…ರಾಜಪರಿವಾರವನ್ನು ಗುರುವು ಸ್ವಾಗತಿಸಿದ್ದಾನೆ..ಎಲ್ಲರೂ ಒಂದು ಫಲಿತಾಂಶಕ್ಕಾಗಿ ಕಾದಿದ್ದಾರೆ.ಹೀಡಿಯಸ್ ಮತ್ತು ಫೀಲಿಯಸ್ ವಿಜಯಿ ಎಂದು ಘೋಷಿಸಿಸಲಾಯಿತು ಅಷ್ಟರಲ್ಲಿ ಒಂದು ರಥ ವೇಗವಾಗಿ ಬಂದು ನಿಂತಿತು.ಅದರಿಂದ ಬಂದಿಳಿದವ ಆಗ್ನೇಸ್.ಎಲ್ಲರೂ ಸಂಭ್ರಮಿಸುತ್ತಿರುವ ಮಧ್ಯೆ,ಒರ್ವ ಕಪ್ಪುವರ್ಣೀಯ ಆಗಂತುಕನು ಬಂದಿರುವುದನ್ನು ಕಂಡ ಫೀಲಿಯಸ್.ಕಪ್ಪುವರ್ಣೀಯ ಕುದುರೆಯನ್ನೇರಿ ತೆರಳಿದ, ಫೀಲಿಯಸ್ ಆತನತ್ತ ಧಾವಿಸಿದ)

ಮುಂದಕ್ಕೆ…..

ವೇಗವಾಗಿ ಓಡಿದ ಫೀಲಿಯಸ್ ಒಡೆದಿದ್ದ ದ್ವಾರದ ಬಳಿ ಒಮ್ಮೆಗೆ ನಿಂತು ನೋಡತೊಡಗಿದ. ಇಲ್ಲ ಆ ವ್ಯಕ್ತಿ ಕಾಣುತ್ತಿಲ್ಲ!..ಮತ್ತೊಮ್ಮೆ ವೇಗ ವೇಗವಾಗಿ ಸುತ್ತಲು ತಿರುಗುತ್ತಾ, ಹುಡುಕುತ್ತಾ ತೆರಳಿದ, ಆ ವ್ಯಕ್ತಿಯ ಸುಳಿವೇ ಇಲ್ಲ…ಇನ್ನು ಹುಡುಕುವುದರಲ್ಲಿ ಅರ್ಥವಿಲ್ಲವೆಂದು ತಿಳಿದು ಮತ್ತೆ ಕ್ರೀಡಾಂಗಣದತ್ತ ತೆರಳಿದ….ದೂರ ದೂರದವರೆಗೆಗೆ ಕ್ರೀಡಾಂಗಣದ ಸದ್ದು ಕೇಳುತಿತ್ತು….ಆಗಸದಲ್ಲಿ ಸೂರ್ಯನು ಮುಳುಗತೊಡಗಿದ..ಕೆಂಬಣ್ಣದ ಸೂರ್ಯನ ಬೆಳಕಿನಿಂದ ಇಡೀಯ ಪ್ರದೇಶ ರಕ್ತ ವರ್ಣದಿಂದ ಕಂಗೊಳಿಸುತಿತ್ತು…ಮುಳುಗುತ್ತಿರುವ ಸೂರ್ಯ ಈರ್ವರು ಮಹಾಬಲಿಗಳ ಉದಯಕ್ಕೆ ಸಾಕ್ಷಿಯಾಗಿದ್ದ. ಕೇವಲ ವೀರನೊಬ್ಬನನ್ನು ಹುಡುಕಲು ಈ ಸ್ಪರ್ಧೆ ಏರ್ಪಡಿಸುವುದಿದ್ದರೆ.ಘನಭೀಕರ ಕಾಡು,ಮೂರು ನದಿ ಮತ್ತು ಪ್ಯಾರಡೈಸೋಸ್ ನಗರದ ದಕ್ಷಿಣಕ್ಕೆ ಇರುವ ಸರಹದ್ದನ್ನು ದಾಟಿ ಅಲ್ಲಿದ್ದ ಬಂಗಾರ ವರ್ಣದ ಹೂವನ್ನು ತರುವ, ಭಯಾನಕ ಸಾಹಸದ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರೇ?…ಇದರ ಹಿಂದಿರುವ ಕಾರಣ ನಿಗೂಢ…

(ವರ್ತಮಾನ ಕಾಲದಲ್ಲಿ)
ಪ್ಯಾರಡೈಸೋಸ್ ನಗರದ ಮಧ್ಯೆ ಇರುವ ಪ್ರದೇಶದಲ್ಲಿ ಭವ್ಯವಾದ ಕಟ್ಟಡಗಳ ಸಮೂಹ.ಸುತ್ತಲೂ ಸುಂದರ ಹಚ್ಚ ಹಸುರಿನ ವಾತಾವರಣ.ಅದರಾಚೆಗೆ ಹರಡಿಕೊಂಡಿರುವ ರಾಜ್ಯ,ಆ ರಾಜ್ಯದ ಸುತ್ತಲೂ ಎತ್ತರವಾದ ಕೋಟೆ ಅದರ ರಕ್ಷಣೆಗೆ ಎದೆಯೊಡ್ಡಿ ನಿಂತಿದೆ.ಅದಕ್ಕೆ ತಾಕಿಕೊಂಡೇ ಸುತ್ತಲೂ ನೀರಿನ ಹರಿವು.ಅದರಲ್ಲಿರುವ ಕ್ರೂರ ಜಂತುಗಳು ನೀರಿಗೇನು ಬೀಳುತ್ತದೆ ಎಂಬಂತೆ ಕಾದು ಕುಳಿತಿರುತ್ತವೆ…ಈ ರಾಜ್ಯವನ್ನು ಪ್ರವೇಶಿಸಲು ಇರುವ ದಾರಿಯೆಂದರೆ, ರಾಜ್ಯದ ನಾಲ್ಕು ಸುತ್ತ ನದಿಗೆ ಹಾಕಲಾಗಿರುವ ಬೃಹತ್ ಸೇತುವೆ, ಹೊರಗಿನಿಂದ ಸೇತುವೆಯನ್ನು ದಾಟಿ ಮುಂದಕ್ಕೆ ಬಂದರೆ, ಕೋಟೆಗೆ ಒತ್ತಿಕೊಂಡಂತೆ ಎತ್ತರವಾದ ಕಲ್ಲಿನ ಅಟ್ಟಳಿಗೆ. ಅದರ ಮೇಲೆ ದೊಡ್ಡದಾದ ಮೂರು ಪಂಜುಗಳು ಮತ್ತು ಬೃಹದಾಕಾರದ ಗಂಟೆ. ಒಂದು ವೇಳೆ ಅಪಾಯ ಸಂಭವಿಸಿದಲ್ಲಿ ಪಹರೆಯ ಸೈನಿಕರು ಈ ಗಂಟೆಯನ್ನು ಬಾರಿಸುವಂತೆ ನಿರ್ಮಿಸಲಾಗಿತ್ತು.ಇಂತಹುದೇ ರಚನೆ ರಾಜ್ಯದ ನಾಲ್ಕೂ ಸುತ್ತ ಮಾಡಲಾಗಿತ್ತು. ಅದರ ಆಚೆಗೆ ಸಿಗುವುದು ವಿಶಾಲವಾದ ರಾಜ್ಯ. ರಾಜ್ಯದ ಹೃದಯಭಾಗದಲ್ಲಿ ಒಂದನ್ನೊಂದು ಮೀರಿಸುವ ಭವ್ಯ ಕಟ್ಟಡಗಳ ಸಾಲು. ಅದರ ಕೇಂದ್ರಸ್ಥಾನದಲ್ಲಿ ಇರುವುದೇ, ಮೆಗಲಸ್ ಬ್ಯಾಸಿಲಸ್ ನ ಅರಮನೆ. ಹಿರಿಯರಿಂದ ಬಳುವಳಿಯಾಗಿ ಸಿಕ್ಕಿದ ಈ ಅರಮನೆ, ಶ್ವೇತ ವರ್ಣದಿಂದ ಕಂಗೊಳಿಸುತ್ತಿದೆ. ಅಲ್ಲಲ್ಲಿ ಬಂಗಾರವರ್ಣದ ಪುತ್ತಳಿಗಳು. ಅರಮನೆಯ ಸುತ್ತಲೂ ಹತ್ತು ದಿಕ್ಕುಗಳಿಗೆ ರಾಜ್ಯವನ್ನು ಆಳಿದ ಮಹಾರಾಜರ ಮಹಾ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಅರಮನೆಯನ್ನು ಮುಂಭಾಗದಿಂದ ಕಾಣುತ್ತಿದ್ದರೆ ಸ್ವರ್ಗದಂತೆ ಗೋಚರಿಸುತ್ತಿತ್ತು. ಸುಮಾರು ಹತ್ತು ಗಜ ಅಗಲದ ಮೂವತ್ತು ಮೆಟ್ಟಿಲುಗಳು, ಕೊನೆಯ ಮೆಟ್ಟಿಲಿನ ಮೇಲೆ ಅರಮನೆಯ ಮುಂದಿನ ಛಾವಣಿಯನ್ನು ಹೊತ್ತು ನಿಂತಿರುವ ಬೃಹದಾಕಾರದ ಕಂಬಗಳು. ಅದರ ಕೊನೇಗೆ ಅರಮನೆಯ ಹೆಬ್ಬಾಗಿಲು. ಇಂತಹುದೇ ಸುಂದರವಾದ ಕಟ್ಟಡಗಳನ್ನು ಹೊಂದಿರುವ ಈ ಪ್ರದೇಶಕ್ಕೆ ಸಾಮಾನ್ಯರಿಗೆ ಅನುಮತಿ ಇಲ್ಲದೆ ಪ್ರವೇಶವಿಲ್ಲ.

ಅರಮನೆ ಕಟ್ಟಡಗಳ ಸಾಲಿನ ಕೊನೆಯಲ್ಲಿ ಕೆಂಪು ವರ್ಣದ ಒಂದು ಕಟ್ಟಡ ಭವ್ಯವೂ, ಸುಂದರವೂ ಆಗಿದೆ. ಅದರ ಮೇಲೆ ಗುಂಬಝ್ ನಂತಹ ರಚನೆಗಳಿವೆ. ಸೂರ್ಯಾಸ್ತವಾದುದರಿಂದ ಇಡಿಯ ಪ್ರದೇಶಕ್ಕೆ ಕತ್ತಲಾವರಿಸಿತ್ತು. ಆ ಕಟ್ಟಡದ ಸುತ್ತಲೂ ಬೆಳಕಿಗಾಗಿ ದೀವಟಿಗೆಯನ್ನು ಹಚ್ಚಿಡಲಾಗಿದೆ. ದೊಂದಿ ಬೆಳಕಿನಲ್ಲಿ ರುದ್ರರಮಣೀಯವಾಗಿ ಕಾಣುವ ಕಟ್ಟಡ. ಮೇಲಂತಸ್ತಿನಲ್ಲಿರುವ ಕೋಣೆಗಳ ಸಾಲಿನಲ್ಲಿ, ಒಂದು ಕೋಣೆಯಲ್ಲಿ ಬೆಳಕೊಂದು ಕಾಣಿಸುತ್ತಿದೆ. ಅಲ್ಲಿ ವ್ಯಕ್ತಿಯೋರ್ವ ಕುಳಿತಿದ್ದಾನೆ, ಯಾವುದೋ ಗಾಢ ಚಿಂತೆಯಲ್ಲಿದ್ದಾನೆ. ನೆಟ್ಟ ದೃಷ್ಟಿಯಲ್ಲಿ ಕಣ್ಣನ್ನು ವೇಗವಾಗಿ ಅತ್ತಿಂದಿತ್ತ ಸರಿಸುತ್ತಾ, ತನ್ನಷ್ಟಕ್ಕೆ ಗೊಣಗುತ್ತಿದ್ದಾನೆ. ಕೋಣೆಯಲ್ಲಿರುವ ದೀಪದ ಎಣ್ಣೆ ಕಡಿಮೆಯಾದಂತೆ ನಿಧಾನವಾಗಿ ಉರಿಯುತಿತ್ತು. ಆ ವ್ಯಕ್ತಿ ನಿಧಾನವಾಗಿ ನಡೆದುಬಂದು ದೀಪಕ್ಕೆ ಎಣ್ಣೆ ಸುರಿಯಲಾರಂಭಿಸಿದ. ದೀಪ ಪ್ರಾಜ್ವಲ್ಯಮಾನವಾಗಿ ಉರಿಯಿತು. ತಕ್ಷಣಕ್ಕೆ ಆತನ ಮುಖ ದೀಪದ ಬೆಳಕಿನಲ್ಲಿ ಹೊಳೆಯಲಾರಂಭಿಸಿತು.’ಉಮೈಲ್ ವೀಸಲ್’!… ಹೌದು ಯಾರದೋ ಬರೋಣಕ್ಕಾಗಿ ಕಾದುಕುಳಿತಿದ್ದ. ದೀಪಕ್ಕೆ ಎಣ್ಣೆ ಸುರಿದವನೇ. ಮತ್ತೆ ಮಂಚದಲ್ಲಿ ಬಂದು ಕುಳಿತು ಯೋಚಿಸಲಾರಂಭಿಸಿದ. ಅಷ್ಟರಲ್ಲಿ ಬಲಿಷ್ಠವಾದ ಬಾಗಿಲನ್ನು ತಳ್ಳಿ,ಅದರ ಎದುರು ಜೋಡಿಸಿದ್ದ ಪರದೆಯನ್ನು ಸರಿಸಿ, ಓರ್ವ ಸ್ಪುರದ್ರೂಪಿ ಯುವಕ ಒಳಬಂದ. ಬೆಳ್ಳಗಿನ ಮೈ ಬಣ್ಣ, ನುಣುಪಾದ ಗಿಡ್ಡ ಕೂದಲು, ಆಕರ್ಷಕ ಮೈಕಟ್ಟು, ಸುಂದರ ಮುಖ. ಓರ್ವ ರಾಜಕುಮಾರನ ಎಲ್ಲಾ ಲಕ್ಷಣಗಳು ಈತನಲ್ಲಿ ಗೋಚರಿಸುತ್ತಿದ್ದವು.

ಅವನ ಬರುವಿಕೆಯನ್ನು ಕುಳಿತಲ್ಲಿಂದಲೇ ಗ್ರಹಿಸಿ,ಬಾಗಿಲಿಗೆ ವಿರುದ್ದ ಮುಖವಾಗಿ ಕುಳಿತಿದ್ದ ವೀಸಲ್..ಅಂತೆಯೇ ಎದ್ದು ಎದುರಿಗಿದ್ದ ಬುಟ್ಟಿಯಲ್ಲಿ ಜೊಡಿಸಿಟ್ಟಿದ್ದ ಹಣ್ಣುಗಳಲ್ಲಿ, ಸೇಬನ್ನು ಎತ್ತಿ ಪಕ್ಕದಲ್ಲಿದ್ದ ಚೂರಿಯಿಂದ ಅದರ ಸಿಪ್ಪೆ ತೆಗೆಯುತ್ತಾ ಹೇಳಿದ “ಒಂದು ಸಿಂಹ, ಪ್ರೀತಿಯಿಂದ ಒಂದು ಸಿಂಹದದಮರಿಯನ್ನು ಸಾಕುತ್ತಿತ್ತು. ಸಿಂಹದಮರಿ ಬೆಳೆದು ದೊಡ್ಡದಾಯಿತು!… ಆದರೆ ನಾನು ಬೇಟೆಯಾಡುವುದಿಲ್ಲ ಬದಲಾಗಿ ಹುಲ್ಲು ತಿಂದು ಬದುಕುತ್ತೇನೆ ಎಂದಿತು”
ಅಷ್ಟರಲ್ಲಿ ಏನೂ ಅರ್ಥವಾಗದೆ ಆ ಹುಡುಗ” ಏನಾಯ್ತು ಮಹಾಮಂತ್ರಿಗಳೇ” ಎಂದು ಕೇಳಿದ.
ವಿಸಲ್ ಜೋರಾಗಿ ನಗುತ್ತಾ ” ಮಹಾಮಂತ್ರಿ…ಹ್ನಾಂ.. ಮಹಾಮಂತ್ರಿ…” ಎನ್ನುತ್ತಾ ತಕ್ಷಣಕ್ಕೆ ಮುಖವನ್ನ ಬಿಗಿಮಾಡಿ,
“ಕಾಡಿನಲ್ಲಿ ರಾಜನಾಗಿ ಮೆರೆಯಬೇಕಿದ್ದ ಸಿಂಹ… ತನ್ನದೇ ಗುಹೆಯಲ್ಲಿ ಭಿಕ್ಷೆಯ ಅನ್ನ ತಿನ್ನುತ್ತಿದೆ..” ಎಂದ
ಅದಕ್ಕೆ ಆ ಯುವಕ” ಗೌರವದ ಅನ್ನವನ್ನು ಭಿಕ್ಷೆ ಎಂದುಕೊಂಡರೆ, ತಪ್ಪು ಸಿಂಹದಲ್ಲವೇ” ಎಂದ
ಇಷ್ಟನ್ನು ಕೇಳಿ ಕೆಂಡಾಮಂಡಲವಾದ ವೀಸಲ್ ಕೈಯಲ್ಲಿದ್ದ ಸೇಬನ್ನು ಹಿಚುಕಿ, ಥಟ್ಟನೆ ತಿರುಗಿ ಮತ್ತೊಂದು ಕೈಯಲ್ಲಿ ಚೂರಿಯನ್ನು ಹಿಡಿದು ” ಆಗ್ನೇಸ್….” ಎನ್ನುತ್ತಾ ಯುವಕನತ್ತ ಧಾವಿಸಿದ.

ಮುಂದುವರೆಯುವುದು…….

Advertisement
web