ಆಗ್ನೇಸ್‌ನ ಗೆಳೆತನ‌ ಮತ್ತು ಹೆಲೆನಾಳ ಪ್ರೀತಿ

Advertisement

ನೀವು ಓದಿದ್ದು….
(ಈರ್ವರು ಆಗಂತುಕರು ಭೀಕರ ಕಾಡಿನಲ್ಲಿ ನಡೆಯುತ್ತಿದ್ದಾರೆ… ಹೇಸ್ಟಿಯಾ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ತನ್ನ ಮಕ್ಕಳನ್ನು ಮಲಗಿಸುತ್ತಾ ಅಡುಗೆ ಮಾಡುವ ತರಾತುರಿಯ ನಡುವೆ ಗಂಡನಿಗೆ ಬೈಯುತ್ತಿದ್ದಾಳೆ, ತಕ್ಷಣಕ್ಕೆ ಭೀಕರ ನರಳಾಟದ ಅರಚಾಟ ಕೇಳಿಸಿತು…ಪ್ಯಾರಡೈಸೋಸ್ ನಗರದ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಜನ ನೆರೆದಿದ್ದಾರೆ…ರಾಜಪರಿವಾರವನ್ನು ಗುರುವು ಸ್ವಾಗತಿಸಿದ್ದಾನೆ..ಎಲ್ಲರೂ ಒಂದು ಫಲಿತಾಂಶಕ್ಕಾಗಿ ಕಾದಿದ್ದಾರೆ.ಹೀಡಿಯಸ್ ಮತ್ತು ಫೀಲಿಯಸ್ ವಿಜಯಿ ಎಂದು ಘೋಷಿಸಲಾಯಿತು ಅಷ್ಟರಲ್ಲಿ ಒಂದು ರಥ ವೇಗವಾಗಿ ಬಂದು ನಿಂತಿತು.ಅದರಿಂದ ಬಂದಿಳಿದವ ಆಗ್ನೇಸ್.ಎಲ್ಲರೂ ಸಂಭ್ರಮಿಸುತ್ತಿರುವ ಮಧ್ಯೆ,ಓರ್ವ ಕಪ್ಪುವರ್ಣೀಯ ಆಗಂತುಕನು ಬಂದಿರುವುದನ್ನು ಕಂಡ ಫೀಲಿಯಸ್.ಕಪ್ಪುವರ್ಣೀಯ, ಕುದುರೆಯನ್ನೇರಿ ತೆರಳಿದ, ಫೀಲಿಯಸ್ ಆತನತ್ತ ಧಾವಿಸಿದ. ಆತ ಕಾಣಲಿಲ್ಲ…ಪ್ಯಾರಡೈಸೋಸ್ ನಗರದ ಕೆಂಪು ಅರಮನೆಯಲ್ಲಿ ವೀಸಲ್ ಮತ್ತು ಆಗ್ನೇಸ್ ಮಾತನಾಡುತ್ತಿದ್ದಾರೆ..ಆ ವೇಳೆಗೆ ವೀಸಲ್ ನ ಮಾತು ಕೇಳಿ ಆಗ್ನೇಸ್ ಸ್ತಬ್ಧನಾಗಿದ್ದ.ಊರ ಹೊರವಲಯದಲ್ಲಿರುವ ಕಥೆ ಹೇಳುವ ಮುದುಕ ಯಾವುದೊ ಒಂದು ಅಸಂಭವನೀಯ ದೃಶ್ಯ ಕಂಡನು.ಇತ್ತ ಏನೋ ಪ್ರತಿಷ್ಟೆಯ ಹುಡುಕಾಟಕ್ಕಾಗಿ ಕಾಡಿಗೆ ಬಂದ ಫೀಲಿಯಸ್,ತಾನು ಶಬ್ದ ಕೇಳಿ ಎಸೆದ ಬಾಣ ಗುರಿ ತಾಗಿರುವಲ್ಲಿಗೆ ಬಂದು, ದೃಶ್ಯವನ್ನು ಕಂಡು ದಂಗಾಗಿ ಕುಳಿತ.ಇತ್ತ ಹೀಡಿಯಸ್ ಅರಮನೆಯಲ್ಲಿ ಚಿಂತಾಕ್ರಾಂತನಾಗಿದ್ದಾನೆ.ಇದನ್ನು ತಿಳಿಯಬಂದ ಹೆಲೆನಾಳಿಗೂ ಹೀಡಿಯಸ್‌ನಿಗೂ ಮನಸ್ತಾಪವಾಗಿ ಹೀಡಿಯಸ್ ಹಳೆಯ ನೆನಪುಗಳಿಗೆ ಜಾರಿದ..ಬಗ್ದ್ ನಾದಮ್ ಸ್ಪರ್ದೆ ಗೆದ್ದ ಹೀಡಿಯಸ್ ಮತ್ತು ಫೀಲಿಯಸ್ ನನ್ನು ಒಂದು ಕಾರ್ಯಾಕ್ಕಾಗಿ ನಿಯೋಜಿಸಲು ಗುರು ಹಾಗು ರಾಜ ನಿರ್ಧರಿಸಿದ್ದಾರೆ.ಬಗ್ದ್ ನಾದಾಮ್ ಸ್ಪರ್ದೆಯನ್ನು ವೀಕ್ಷಿಸಿ ಬಂದ ರಾಜಕುಮಾರಿ ಓರ್ವ ವೀರನಿಗೆ ಮನಸೋತಿದ್ದಾಳೆ.ಮತ್ತು ಇದರ ಕುರಿತಾಗಿ ಮಾತನಾಡಲು ತನ್ನ ಪರಿಚಾರಕಿ ಒಪಿಲಿಯಾಳನ್ನು ಕರೆಸಿ ಆಗ್ನೇಸ್‌ನನ್ನು ಬರಹೇಳಿದ್ದಾಳೆ )

ವಿಶಾಲವಾಗಿ ವ್ಯಾಪಿಸಿರುವ ಹೂದೋಟ,ಹಸಿರು ವರ್ಣದಿಂದ ನೆಲವನ್ನು ಹಾಸಿದಂತಿರುವ ಹುಲ್ಲುಗಳು,ಅಲ್ಲಲ್ಲಿ ಹಾರುತ್ತಿರುವ ಚಿಟ್ಟೆಗಳು,ಕಣ್ಣಾಲಿಗಳಿಗೆ ವಿಶ್ರಾಂತಿ ನೀಡಿ,ಮನಕೆ ಮುದ ನೀಡುವ ಸುಂದರ ಹೂವುಗಳು, ಅಲ್ಲಲ್ಲಿ ಹಾರುವ ಕಾರಂಜಿಗಳು.ಅತ್ಯಂತ ಸುಂದರ ಉಪವನ.ಅದರ ಆಚೆಗೆ ಬೆಳೆದು ನಿಂತಿರುವ ಮರಗಳ ಸಾಲು.ತುಸು ಇಬ್ಬನಿಯು ಅದರ ಸೌಂದರ್ಯವನ್ನು ಮತ್ತೂ ಹೆಚ್ಚಿಸಿತ್ತು. ಬಿಳಿಯ ನೀಳ ದಿರಿಸಿನ ಮೇಲೆ ಚಳಿಯಾಗದಂತೆ ಹಾಕಿರುವ,ಬಿಳಿಯ ರೋಮದ ರಚನೆಯಿರುವ ಚಳಿಗವಸುವನ್ನು ತೊಟ್ಟು ಹೆಲೆನಾ ಒಬ್ಬಳೇ, ಅತ್ತಿಂದಿತ್ತ ಓಡಾಡುತ್ತಾ, ಚಡಪಡಿಸುತ್ತಾ ಯಾರಿಗೋ ಕಾಯುತ್ತಿದ್ದಾಳೆ.ಹೌದು, ಅದು ಆತನ ಬರೋಣಕ್ಕಾಗಿ..!
ಮನದಲ್ಲಿ ಉದ್ವೇಗ,ಚಿಂತೆ.ತಾನು ಹೇಳಹೊರಟಿರುವ ವಿಚಾರ ಅಂತಹುದು. ಒಂದುವೇಳೆ ಅದಕ್ಕೆ ಆತ ಒಪ್ಪದಿದ್ದರೆ….ಎಂಬ ಚಿಂತಾ ರೇಖೆಯೂ ಹಣೆಯಲ್ಲಿ ಮೂಡಿತ್ತು… ಅತ್ತಿಂದಿತ್ತ ಓಡಾಡುತ್ತಿದ್ದಾಳೆ….
ಅಷ್ಟರಲ್ಲಿ ಕುದುರೆಯ ಹೇಷಾರವದೊಂದಿಗೆ ಖುರಪುಟದ ಶಬ್ದ ಕೇಳಿಸಿತು.ಈಕೆಯ ಹೃದಯದ ಬಡಿತ ಹೆಚ್ಚಾಯಿತು.ತನ್ನ ನಡೆಯನ್ನು ನಿಲ್ಲಿಸಿ ಹಿಂತಿರುಗಿ ನೋಡಿದಳು. ‘ಆಗ್ನೇಸ್’ ಬಿಳಿ ಕುದುರೆಯನ್ನೇರಿ ಬರುತ್ತಿದ್ದಾನೆ.ಬಂದವನೇ, ಕುದುರೆಯಿಂದಿಳಿದು ಅದನ್ನು ಮೇಯಲು ಬಿಟ್ಟು ನೇರವಾಗಿ ಹೆಲೆನಾಳ ಬಳಿಬಂದು ಒಂದು ಮೊಣಕಾಲೂರಿ, ಬಲ ಕೈಯನ್ನು ತನ್ನ ಎಡಭುಜದ ಮೇಲಿಟ್ಟು ತಲೆ ತಗ್ಗಿಸಿ ” ರಾಜ ಕುಮಾರಿಗೆ ಆಗ್ನೇಸ್‌ನ ಪ್ರಣಾಮಗಳು” ಎಂದ.
ಇದನ್ನು ಕಂಡು ಹೆಲೆನಾ ” ಸಾಕು ಆಗ್ನೇಸ್, ನಾನು ಮುಖ್ಯ ವಿಷಯವನ್ನು ತಿಳಿಸಲು ನಿನ್ನನ್ನು ಕರೆಸಿದ್ದೇನೆ, ಈಗ ತಮಾಷೆ ಬೇಡ “ಎಂದಳು
ನಗುತ್ತಾ ಮೇಲೆದ್ದ ಆಗ್ನೇಸ್ “ತಮಾಷೆಯೇ?…ಇಲ್ಲಪ್ಪಾ…ಪ್ಯಾರಡೈಸೋಸ್ ರಾಜ್ಯದ ರಾಜಕುಮಾರಿಗೆ, ಪ್ರಣಾಮ ಸಲ್ಲಿಸುವುದು ತಮಾಷೆಯೇ?”
ತುಸು ಕೋಪವನ್ನು ತಂದುಕೊಳ್ಳುತ್ತಾ ಹೆಲೆನಾ” ಆಗ್ನೇಸ್, ಇದಕ್ಕೆಲ್ಲಾ ನನ್ನಲ್ಲಿ ಸಮಯವಿಲ್ಲ.ನಿನ್ನನ್ನು ಕರೆಸಿಕೊಂಡ ವಿಷಯವನ್ನು ನೇರವಾಗಿ ತಿಳಿಸುತ್ತೇನೆ” ಎನ್ನುತ್ತಾ ಸ್ವಲ್ಪ ತಡವರಿಸಿ ” ಆಗ್ನೇಸ್, ಬಾಲ್ಯದಿಂದಲೇ ನೀನು ನನಗೆ ಮಿತ್ರನಾಗಿದ್ದಿ.ನಿನ್ನಲ್ಲಿ ಹೇಳದಿರುವುದೇನಿದೆ ಹೇಳು…ಆದರೂ ನಿನ್ನಲ್ಲಿಯೂ ಹೇಳದೆ, ನನ್ನೊಳಗೆ ಬಚ್ಚಿಟ್ಟ ಸತ್ಯವೊಂದನ್ನು ನಿನಗೆ ಹೇಳಬೇಕಾಗಿದೆ.” ಎನ್ನುತ್ತಾ ಆಗ್ನೇಸ್‌ನತ್ತ ತಿರುಗಿದಳು. ಆದರೆ ಆಗ್ನೇಸ್ ಹೂವೊಂದನ್ನು ಕಿತ್ತು, ಅದನ್ನೇ ಅತೀ ಕುತೂಹಲದಿಂದ ನೋಡುತ್ತಾ ಅವಳ ಮಾತನ್ನು ನಿರ್ಲಕ್ಷಿಸುವಂತೆ ತೋರಿದ.
ಹೆಲೆನಾಳ ಕಣ್ಣಲ್ಲಿ ನೀರು ಜಿನುಗಿತು ಗದ್ಗದಿತವಾಗಿ ” ಆಗ್ನೇಸ್” ಎಂದು ಕರೆದಳು.ಮುಖ ಬಾಡಿತು,ಹುಬ್ಬುಗಳು ಗಂಟ್ಟಿಕ್ಕಿದವು.
” ಒ….ಒಹೋ…ಕ್ಷಮೆಯಿರಲಿ ರಾಜಕುಮಾರಿ…ಅಲ್ಲಲ್ಲಾ…ಹೆಲೆನಾ…ಇಲ್ಲಿ ಬರುವುದೇ ಅಪರೂಪ ಅಲ್ಲವೆ? ಅದಕ್ಕೆ ಉಪವನ ನೋಡುವುದರಲ್ಲೇ ಮಗ್ನನಾದುದು …ಅಯ್ಯೋ! ನೀನು ಅಳುತ್ತಿದ್ದೀಯೇ?..ಹೆಲೆನಾ ಏನಾಯಿತು..?” ಎಂದು ಅತ್ಯಾಶ್ಚರ್ಯದಿಂದ ಕೇಳಿದ.
” ಆಗ್ನೇಸ್, ನೀನಾದರೂ ನನ್ನನ್ನು ಅರ್ಥ ಮಾಡಿಕೊಳ್ಳುತ್ತೀ ಎಂದುಕೊಂಡಿದ್ದೆ….ಅದೂ ಸುಳ್ಳಾಯಿತು” ಎನ್ನುತ್ತಾ ಕಣ್ಣೀರು ಒರೆಸಿಕೊಂಡಳು ಹೆಲೆನಾ
” ಹೇಯ್…ಹೇಯ್…ನಾನು ತಮಾಷೆ ಮಾಡಿದೆ ಏನಾಯಿತು ಹೇಳು…ನೀನ್ಯಾಕೆ ಹೀಗಾಗಿದ್ದೀ?..ಯಾಕೆ ಅಳುತ್ತಿದ್ದಿಯಾ?..ಏನಾಯಿತು?” ಎಂದು ಕೇಳಿದ ಆಗ್ನೇಸ್.
ಸ್ವಲ್ಪ ಸಮಧಾನ ತಂದುಕೊಳ್ಳುತ್ತಾ ಹೆಲೆನಾ ” ಆಗ್ನೇಸ್ ನೀನು ನನ್ನದೊಂದು ಕೋರಿಕೆಯನ್ನು ಈಡೇರಿಸುವೆಯಾ…?” ಎಂದು ಕೇಳಿದಳು
” ಒಂದ್ಯಾಕೆ ಹತ್ತು ಕೇಳು, ನಿನ್ನ ಕೋರಿಕೆಯನ್ನು ಈಡೆರಿಸದ ಹೊರತು ನಮ್ಮ ಈ ಗೆಳೆತನ ಏಕೆ?…ನನ್ನಿಂದ ಸಾಧ್ಯವಾಗುವುದಿದ್ದರೆ ಖಂಡಿತವಾಗಿಯೂ ನೆರವೇರಿಸುತ್ತೇನೆ”…
“ಆಗ್ನೇಸ್ ಎಳೆಯ ಪ್ರಾಯದಿಂದ ನಿನ್ನನ್ನು ಆತ್ಮೀಯ ಗೆಳೆಯ ಎಂದುಕೊಂಡವಳು ನಾನು.ಅದಕ್ಕಾಗಿ ನಿನ್ನಲ್ಲಿ ಮಾತ್ರ ಈ ವಿಚಾರವನ್ನು ತಿಳಿಸುತ್ತಿದ್ದೇನೆ, ನಿನ್ನ ಹೊರತು ಬೇರಾರಿಗೂ ಗೊತ್ತಾಗಕೂಡದು…”
” ಹೆಲೆನಾ…ಇಲ್ಲ ನನ್ನ ಹೊರತು ಬೇರಾರಿಗೂ ಗೊತ್ತಾಗುವುದಿಲ್ಲ…ಅದೆಷ್ಟೇ ಕಠಿಣ ಕಾರ್ಯವಾದರೂ ಸರಿಯೆ,ನನ್ನ ಸರ್ವ ಪ್ರಯತ್ನವನ್ನು ಮಾಡುತ್ತೇನೆ…ಏನು ಆಗಬೇಕು ಹೇಳು!?..”
” ಹಲವು ಸಮಯಗಳಿಂದ ನಾನು ನಾನಾಗಿಲ್ಲ….ಯಾರದ್ದೋ ವಶವಾಗಿದ್ದೇನೆ..ನಾನು ಓರ್ವ ವೀರನಿಗೆ ಮನಸೋತಿದ್ದೇನೆ.ಆತನ ಜತೆ ಜೀವನದ ಪ್ರತಿ ಘಳಿಗೆಯನ್ನು ಕಳೆಯಬೇಕೆಂದು ನಿರ್ಧರಿಸಿದ್ದೇನೆ…ಅವನಿಲ್ಲದ ಜೀವನ ನನಗೆ ಬೇಡ ಎನಿಸಿದೆ..”

” ಹ್ಞಾಂ….ಏನಂದೆ?” ಎಂದು ಆಗ್ನೇಸ್ ಹೆಲೆನಾಳನ್ನು ಕಣ್ಣರಳಿಸಿ ನೋಡಲಾರಂಭಿಸಿದ.
ಹೆಲೆನಾ ಮುಂದುವರೆಸುತ್ತಾ…
“ಹೌದು ಆಗ್ನೆಸ್ ..ನಾನೋರ್ವ ವೀರನ ಪ್ರೀತಿಯಲ್ಲಿ ಬಂಧಿತಳಾಗಿದ್ದೇನೆ..ಆತನನ್ನು ವಿವಾಹವಾಗಲು ಇಚ್ಛೆಯಿದೆ”ಇದನ್ನು ಕೇಳಿ ಆಗ್ನೇಸ್ ತುಸುನಗುತ್ತಾ “ಅದಕ್ಕೆ ಯಾಕೆ ಅಷ್ಟು ಚಿಂತೆ, ನಿನ್ನಲ್ಲಿ ನಿನ್ನ ತಂದೆ ಪ್ರಾಣವನ್ನೇ ಇಟ್ಟುಕೊಂಡಿದ್ದಾರೆ…ನಿನಗಾಗಿ ಪ್ರಾಣಕೊಡಲೂ ತಯಾರಿರುವ ಅವರು, ಈತನನ್ನು ಮದುವೆ ಮಾಡಿಸಲಾರರೇ..?
ಅದೂ ಅಲ್ಲದೇ ನಿನ್ನ ಮಾತಿಗೆ ಯಾವತ್ತೂ ಇಲ್ಲ ಎಂದವರಲ್ಲ…”
ಎಂದ.”ಅದೇ ಚಿಂತೆ ನನಗೆ ಆಗ್ನೇಸ್..! ನಾನು ಕೇಳಿದರೆ ಇಲ್ಲ ಎನ್ನಲಾರರು. ಆದರೆ ಅವರಿಗೆ ಮೆಚ್ಚುಗೆಯಾಗುವಂತಹ ವರ ಇವನಲ್ಲದಿದ್ದರೆ…ಮನಸ್ಸಿನೊಳಗಿನ ಬೇಸರದಿಂದಲೇ ನನಗೆ ಮದುವೆ ಮಾಡಿ ಕೊಡುತ್ತಾರೆ…ನನ್ನ ತಂದೆಗೆ ಇಂತಹ ಪರಿಸ್ಥಿತಿ ತಂದಿಡಲು ನನಗೆ ಇಚ್ಛೆಯಿಲ್ಲ”
” ಹಾಗಿದ್ದರೆ ಬಿಟ್ಟು ಬಿಡು ಹೆಲೆನಾ…ಅವರು ನೋಡಿದ ವರನನ್ನು ಮದುವೆ ಆಗು”
ಆಗ್ನೇಸ್ ಇಷ್ಟು ಹೇಳಿದ್ದೇ ತಡ, ಹೆಲೆನಾಳ ಕಣ್ಣುಗಳು ಮತ್ತೆ ತೇವವಾದುವು‌ ” ಆತನನ್ನು ಬಿಟ್ಟು ಬದುಕಲಾರೆ…ಇಂತ ಸಂದಿಗ್ದ ಪರಿಸ್ಥಿಯಲ್ಲಿದ್ದೇನೆ..ನನಗೆ ನೀನೆ ಆಸರೆ …ನೀನೇನಾದರು ಮಾಡಲಾದೀತೇ…? ದಯವಿಟ್ಟು ಒಂದು ಸಹಾಯ ಮಾಡು”
ಎಂದು ಅಂಗಲಾಚಿದಳು.
” ಅಯ್ಯೋ ಇದೊಳ್ಳೆ..ಪಜೀತಿಯಾಯ್ತಲ್ಲ…ಇದನ್ನು ಹೇಗೆ ಬಗೆಹರಿಸುವುದು… ಅತ್ತ ಆತನನ್ನು ಬಿಡಲು ಮನಸ್ಸಿಲ್ಲ…ಇತ್ತ ತಂದೆಗೆ ಮನನೋಯಿಸಲು ಇಚ್ಛೆಇಲ್ಲ…ಏನು ಮಾಡೋಣ?..ಅದಿರಲಿ ಆ ವೀರ ಯಾರು..?” ಎಂದು ಕೇಳಿದ ಆಗ್ನೇಸ್. ಅದನ್ನು ಕೇಳುತ್ತಲೇ ಹೆಲೆನಾ ಆಗ್ನೇಸ್‌ನ ಕಡೆ ಕೈ ತೋರಿದಳು.ಇದನ್ನು ಕಂಡು ಹೌಹಾರಿದ ಆಗ್ನೇಸ್ ” ನಾ..ನೇ” ಎಂದು ಕೇಳಿದ…ಅದಕ್ಕೆ ಹೆಲೆನಾ, ಆಗ್ನೇಸ್‌ನನ್ನು ಅಲ್ಲಗಳೆಯುತ್ತಾ
” ನೀನಲ್ಲ ಆಗ್ನೇಸ್…ನನ್ನ‌ ಮನಗೆದ್ದಿರುವ ವೀರ,ನಿನ್ನ ಆತ್ಮೀಯ ಗೆಳೆಯ ಹೀಡಿಯಸ್”ಎಂದಳು
(ಮುಂದುವರೆಯುವುದು)

Advertisement
web