ಒಬ್ಬ ವ್ಯಕ್ತಿಯ ಒಂದು ದೇಗುಲದ ಒಂದು ವಿದ್ಯಾಸಂಸ್ಥೆ…ಅಥವಾ ಒಂದು ಸಂಘ-ಸಂಸ್ಥೆಯ ಬದುಕಿನಲ್ಲಿ ಐದು,ಹತ್ತು,ಇಪ್ಪತ್ತೈದು,ಐವತ್ತು,ಅರುವತ್ತು,ಎಪ್ಪತ್ತೈದು ,ನೂರು ವರುಷಗಳು ಮಹತ್ವ ಸ್ಥಾನ ಪಡೆಯುತ್ತವೆ.
ದಕ ಜಿಲ್ಲೆಯ ಪುತ್ತೂರು ತಾಲೂಕಿನ ಬೋರ್ಡ್ ಹೈಸ್ಕೂಲು,ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೀಗ ನೂರ ಐದು ವರುಷಗಳ ಸಂಭ್ರಮ.1916ರಲ್ಲಿ ಸ್ಥಾಪನೆಗೊಂಡ ಈ ವಿದ್ಯಾದೇಗುಲ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಸರಕಾರಿ ಸಂಸ್ಥೆಗಳಲ್ಲಿ ಅತ್ಯಂತ ಪುರಾತನ,ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ,ಲಕ್ಷಾಂತರ ಹಿರಿಯವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರೆಲ್ಲ ದೇಶ-ವಿದೇಶಗಳಲ್ಲಿ ನಾನಾ ಉದ್ಯೋಗಗಳ ಹೊಂದಿ ಬದುಕು ಕಟ್ಟಿಕೊಳ್ಳಲು ಕಾರಣವಾದ ಮಾತೃಸಂಸ್ಥೆಯೆನಿಸಿಕೊಂಡಿದೆ.
ಹಿರಿಯ ಕ್ರಿಯಾಶೀಲ ಮುಖ್ಯಸ್ಥರನ್ನು ಗುರುವೃಂದವನ್ನು ಹೊಂದಿರುವ ಈ ವಿದ್ಯಾದೇಗುಲ ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಇಂದೂ ಮುಂಚೂಣಿಯಲ್ಲಿದೆ.ಇಂದೂ ಅನೇಕ ಪ್ರತಿಭಾವಂತ ಶಿಕ್ಷಕರ ಶಾಲಾಭಿವೃದ್ಧಿ ಸಮಿತಿಯ ಸಹಕಾರ-ಸೇವೆಯೊಂದಿಗೆ ಶಿಕ್ಷಣ,ಕಲೆ-ಸಾಹಿತ್ಯ,ಕ್ರೀಡೆ,ಸಾಂಸ್ಕೃತಿಕ,ಎನ್.ಸಿ.ಸಿ, ವಿಜ್ಞಾನ ಪರಿಸರ ,ಗ್ರಾಹಕ ಕ್ಲಬ್ ..ಹೀಗೆ ವಿವಿಧ ಚಟುವಟಿಕೆಗಳಿಂದ ಫಲಿತಾಂಶದಲ್ಲೂ ಎಂದೂ ಹಿಂದೆ ಬಿದ್ದಿಲ್ಲ.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ಸರ್ವಾದರಣೀಯ ದೇವ.ಆತನ ಸಾನಿಧ್ಯದಲ್ಲಿ ಕೊಂಬೆಟ್ಟು ಗಿರಿಯಲ್ಲಿ ರಾರಾಜಿಸುತ್ತಿರುವ ಈ ವಿದ್ಯಾದೇಗುಲ ತನ್ನ ಸಾಧನೆ ಮಹತ್ವಗಳೊಂದಿಗೆ ಪಾರಂಪಾರಿಕ ತಾಣವೆಂಬ ಹಿರಿಮೆಗೆ ಪಾತ್ರವಾಗಿದೆ.
ಪುರಾತನ ಅನೇಕ ಹಿರಿಮೆಗಳಿಗೆ ಕಾರಣವಾದ ಈ ವಿದ್ಯಾದೇಗುಲ ಶಿಥಿಲಾವಸ್ಥೆಗೊಳಗಾಗಿರುವುದು ಮಕ್ಕಳ ಹಿತದೃಷ್ಠಿಯಿಂದ ಆತಂಕದ ವಿಷಯವಾಗಿದೆ.ದೇವಾಲಯಗಳನ್ನಾದರೆ ಜೀರ್ಣೋದ್ಧಾರಗೊಳಿಸಿ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಜಾತ್ರೋತ್ಸವ ಮಾಡುವುದ ಕಂಡಿದ್ದೇವೆ.ಅದೇ ರೀತಿಯಲ್ಲಿ ಈ ವಿದ್ಯಾದೇಗುಲಕ್ಕೂ ಪುನರುತ್ಥಾನ ಕಾಯಕಲ್ಪ ಆಗಲೇಬೇಕಾಗಿದೆ.
ಸಾಪ್ತಾಹಿಕ ಕರಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಥಿಲಗೊಂಡಿರುವ ರೀಪು,ಪಕಾಸು,ಹಂಚುಗಳನ್ನು ಗಟ್ಟಿಗೊಳಿಸಿ ಹಿಂದಿನ ರೂಪಕ್ಕೆ ತರುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿರುವುದ ಕಂಡು ಮೂಕವಿಸ್ಮಿತನಾದೆ.ಎಲ್ಲರ ನಡೆ ಶಾಲೆಯ ಕಡೆ ಹೆಜ್ಜೆ ಹಾಕುತ್ತಿವೆ.ನಾವು ಕಲಿಸುವಾಗ ಇದ್ದ ಎಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಬಾಳಬೆಳಗಿದ ವಿದ್ಯಾಸಂಸ್ಥೆಯನ್ನೆಂದೂ ಮರೆಯಲಾರರು ಎಂಬುದಕ್ಕೆ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಕ್ರಿಯಾಶೀಲ ನಡೆಯೇ ಕಾರಣ.
ಬರಹ: ನಾರಾಯಣ ರೈ ಕುಕ್ಕುವಳ್ಳಿ. ನಿವೃತ್ತ ಶಿಕ್ಷಕ.