ಸಾಣೂರು :ರೋಟರಿ ಕ್ಲಬ್, ಕಾರ್ಕಳ ರಾಕ್ ಸಿಟಿ ,ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಸಾಣೂರು, ಯುವಕ ಮಂಡಲ (ರಿ.), ಸಾಣೂರು ಮತ್ತು ಈಸಿ ಲೈಫ್ ಎಂಟರ್ಪ್ರೈಸಸ್, ಕಾರ್ಕಳ. ಇವರ ಸಂಯುಕ್ತ ಆಶ್ರಯದಲ್ಲಿ “ಕೃಷಿ ಮತ್ತು ಹೈನುಗಾರಿಕೆ ಉತ್ತೇಜನ ಕಾರ್ಯಾಗಾರ” ಜನವರಿ 5, 2021, ಮಂಗಳವಾರದಂದು ಸಂಜೆ 4.30 ಗಂಟೆಗೆ ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದ ಕಾಜರೊಟ್ಟೂ ಪ್ರಾಕೃತಿಕ ತಾಣದಲ್ಲಿ ಜರುಗಿತು.
ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಗವರ್ನರ್ ರೋಟರಿ ಡಿಸ್ಟ್ರಿಕ್ಟ್ 3182, ರೋಟೇರಿಯನ್ ರಾಜಾರಾಮ್ ಭಟ್ ರವರು ಮಾತನಾಡುತ್ತಾ,”ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಗ್ರಾಮೀಣ ಭಾಗದಲ್ಲಿ ರೈತಮಿತ್ರ ಕಾರ್ಯಕ್ರಮಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಜೊತೆಗೆ ಆಯೋಜಿಸುತ್ತಿದ್ದು, ಸಂಡೂರಿನ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ ಜರುಗುತ್ತಿರುವ ಕೃಷಿ ಮತ್ತು ಹೈನುಗಾರಿಕೆ ಉತ್ತೇಜನ ಕಾರ್ಯಾಗಾರ ಸಾಣೂರಿನ ಕೃಷಿಕರ ಮತ್ತು ಹೈನುಗಾರರ ಉತ್ಸಾಹದ ಭಾಗವಹಿಸುವಿಕೆಯಿಂದ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು“.
ಕೊರೋನಾದ ಸಂಕಷ್ಟಮಯ ಪರಿಸ್ಥಿತಿಯಲ್ಲಿ ದೇಶದ ರೈತಾಪಿ ವರ್ಗ ಮಾತ್ರ ಕೃಷಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವಾಗ ರೈತ ಮಿತ್ರರ ಪರಿಶ್ರಮದಿಂದ ಜನರಿಗೆ ಅಗತ್ಯವಾಗಿ ಬೇಕಾಗಿರುವ ಆರ ಆಹಾರ ಸಾಮಗ್ರಿಗಳಿಗೆ ಯಾವುದೇ ಕೊರತೆಯುಂಟಾಗಿ ರಲಿಲ್ಲ. ದೇಶದ ಬೆನ್ನೆಲುಬಾಗಿರುವ ರೈತಾಪಿ ಬಂಧುಗಳಿಗೆ ಸರಕಾರದ ಮತ್ತು ಜನರ ಇನ್ನಷ್ಟು ಪ್ರೋತ್ಸಾಹ ಸಹಕಾರ ಸಿಗಬೇಕಾಗಿದೆ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ,ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ,”ಕೃಷಿ ಮತ್ತು ಹೈನುಗಾರಿಕೆ ಒಂದಕ್ಕೊಂದು ಪೂರಕ ಚಟುವಟಿಕೆಗಳು.
ಹಸಿರು ಮೇವು, ಜೋಳದ ದಂಟು, ಭತ್ತದ ಬೈಹುಲ್ಲು ಮುಂತಾದವುಗಳು ಹೈನುಗಾರಿಕೆಯಲ್ಲಿ ಹಸುವಿನ ಮುಖ್ಯ ಆಹಾರವಾಗಿ ಬಳಕೆಯಾಗುತ್ತಿದ್ದು, ಸಸ್ಯ ಪೋಷಣೆಗೆ ಮತ್ತು ಕೀಟಗಳಿಂದ ಸಂರಕ್ಷಣೆಗೆ ದನದ ಸೆಗಣಿ ಮತ್ತು ಗೋಮೂತ್ರ ಅತೀ ಅಗತ್ಯದ ವಸ್ತುಗಳಾಗಿದ್ದು, ಕೃಷಿಯನ್ನು ಲಾಭದಾಯಕ ವನ್ನಾಗಿಸಲು ಪ್ರಮುಖ ಪಾತ್ರವನ್ನು ವಹಿಸುತ್ತವೆ“.
ಈ ಸಂದರ್ಭದಲ್ಲಿ ಸಾಣೂರಿನ ಯುವ ಸಾಧಕ ಕೃಷಿಕರಾದ ಶ್ರೀ ಅರುಣ್ ಡಿ’ಸಿಲ್ವಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಣೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ 18ಮಂದಿ ಪಂಚಾಯತ್ ಸದಸ್ಯರನ್ನು ಅಭಿನಂದಿಸಿ, ಗೌರವಿಸಲಾಯಿತು.ಕಾರ್ಕಳ ರಾಕ್ ಸಿಟಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಪ್ರಶಾಂತ ಬೆಳಿ ರಾಯ ರವರು ಸ್ವಾಗತಿಸಿದರು.ಮಾಜಿ ಜಿಲ್ಲಾ ರೋಟರಿ ಗವರ್ನರ್ ಡಾ. ಭರತೇಶ್ ಆದಿರಾಜ್, ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಶ್ರೀ ನವೀನ್ ಅಮೀನ್, ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ನಾಯಕ್, ಭಾವಿ ಅಧ್ಯಕ್ಷರಾದ ಪ್ರಕಾಶ್ ಪೈ, ಕಾರ್ಯದರ್ಶಿ ಶ್ರೀ ಗಣೇಶ್ ಬರ್ಲಾಯ,ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಜಯ ಶೆಟ್ಟಿಗಾರ್ ರವರು ಕಾರ್ಯಕ್ರಮ ನಿರೂಪಿಸಿ ಶ್ರೀ ಪ್ರವೀಣ್ ಶೆಟ್ಟಿ ಅವರು ವಂದನಾರ್ಪಣೆಗೈದರು.
ಪಶುವೈದ್ಯರಾದ ಡಾ. ಶೀತಲ್ ಕುಮಾರ್ ರವರು ಗುಣಮಟ್ಟದ ಹಾಲು ಉತ್ಪಾದನೆ, ಕರು ಪೋಷಣೆ ಮತ್ತು ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿ ಹೈನುಗಾರರರ ಜೊತೆ ನೇರ ಸಂವಾದ ನಡೆಸಿದರು.
ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷತೆ:
ಈಜಿ ಲೈಫ್ ಎಂಟರ್ಪ್ರೈಸಸ್, ಕಾರ್ಕಳ ಸಂಸ್ಥೆಯವರು ಹುಲ್ಲು ಕತ್ತರಿಸುವ, ಹಾಲು ಕರೆಯುವ ಮತ್ತು ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿತೆ ನೀಡಿದರು.