Advertisement

ಕಾರ್ಕಳ ಯುವತಿಯ ಕವರ್ ಡ್ರೈವ್‍ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿ ಪೂಜಾರಿ ಮನೆಯ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ, ಅವರ ಸೋದರ ಸಂಬಂಧಿ ಶರತ್ ಗೊತ್ತಿಲ್ಲದಂತೆ ವೀಡಿಯೋ ಮಾಡಿದ್ದರು.

Advertisement

ಇದನ್ನು ಅಂತರಾಷ್ಟ್ರೀಯ ಸ್ಪೋಟ್ರ್ಸ್ ಮಾಧ್ಯಮ ESPNcricinfo ಜೂನ್ 11ರಂದು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಯುವತಿಯ ಪ್ರಯತ್ನವನ್ನು ಶ್ಲಾಘಿಸಿತ್ತು, ಕಾರ್ಕಳದ ಖಾಸಗಿ ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಜ್ಯೋತಿ, ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡುತ್ತಾರೆ.


“Stepping out to the leg side and smashing it through the covers” ಎಂಬ ಶೀರ್ಷಿಕೆಯೊಂದಿಗೆ 5 ಸೆಕೆಂಡ್‍ಗಳ ಈ ವೀಡೀಯೋವನ್ನು ಪ್ರಕಟಿಸಿತ್ತು. ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದ ಈ ವೀಡೀಯೋವನ್ನು ಜ್ಯೋತಿ ಅವರ ಸಹೋದರನ ಸ್ನೇಹಿತೊಬ್ಬರು ಇಎಸ್‍ಪಿಎನ್‍ಗೆ ಮೇಲ್ ಮಾಡಿದ್ದರು. ಯಾರಿಗೂ ಗೊತ್ತಿಲ್ಲದ ಸೈಲೆಂಟ್ ಜ್ಯೋತಿ ಎಲ್ಲರಿಗೂ ಪರಿಚಿತರಾದರು.

ಚಿಕ್ಕಂದಿನಿಂದಲೂ ಕ್ರಿಕೆಟ್‍ನಲ್ಲಿ ಆಸಕ್ತಿ
ಮನೆಯಲ್ಲಿ ಅಣ್ಣಂದಿರು ಕ್ರಿಕೆಟ್ ಆಡುತ್ತಿದ್ದಾಗ ಶಾಲೆಗೆ ಹೋಗುತ್ತಿದ್ದ ಜ್ಯೋತಿ ಬ್ಯಾಟ್ ಬೀಸುತ್ತಿದ್ದರು, ಇವರ ಅಣ್ಣ ರತೇಶ್ ಪೂಜಾರಿ ಕೂಡ ಕ್ರಿಕೆಟ್ ಆಟಗಾರ, ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಪ್ರಮುಖ ಆಟಗಾರರಾಗಿರುವ ಇವರು, ತಂಗಿಗೆ ಸ್ವತಃ ಗುರುವಿನಂತೆ ಕ್ರಿಕೆಟ್ ಕಲಿಸಿದರು. ಎಂಎಸ್ ಧೋನಿಯ ಫ್ಯಾನ್ ಆಗಿರುವ ಜ್ಯೋತಿ, ಅವರ ಪ್ರತಿಯೊಂದು ಮ್ಯಾಚ್ ಕೂಡ ಮಿಸ್ ಮಾಡದೆ ನೋಡುತ್ತಾರೆ. ಶಾಲಾ ದಿನಗಳಿಂದಲೇ ಆಟೋಟಗಳಲ್ಲಿ ಭಾಗವಹಿಸುತ್ತಿದ್ದ ಈಕೆ, ಸಕ್ರಿಯವಾಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಹೆಣ್ಣುಮಗಳೊಬ್ಬಳು ಪುರುಷರೊಡನೆ ಕ್ರಿಕೆಟ್ ಆಡುವುದನ್ನು ಕಂಡು ನೋಡಿದವರೆಲ್ಲರೂ ಭೇಷ್ ಎನ್ನುತ್ತಿದ್ದರು.


ಜೀವನದಲ್ಲಿ ಏನಾದರೂ ಸಾಧಿಸಬೇಕು.

“ಅವಕಾಶ ಸಿಕ್ಕರೆ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುವೆ” ಎಂದು ಜ್ಯೋತಿ ತಮ್ಮ ಮನದಿಂಗಿತವನ್ನು ಹಂಚಿಕೊಂಡಿದ್ದಾರೆ. “ನನಗೆ ಬೇಗ ಮದುವೆಯಾಗಲು ಇಷ್ಟವಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕು. ತದನಂತರ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇನೆ” ಎಂದು ನಮ್ಮೊಂದಿಗೆ ಹೇಳಿಕೊಂಡರು. ಜ್ಯೋತಿ ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಮನೆಯವರ ಸಂಪೂರ್ಣ ಸಹಕಾರ ಇದೆ ಎಂದು ಸಹೋದರ ರವಿಕಾಂತ್ ಪೂಜಾರಿ ಹೇಳುತ್ತಾರೆ.


ಬೈಕ್ ಕ್ರೇಜ್
ಯಾವತ್ತೂ ಲವಲವಿಕೆಯಿಂದ ಓಡಾಡುವ ಜ್ಯೋತಿಗೆ ಬೈಕ್ ಚಲಾಯಿಸುವುದು ಎಂದರೆ ಎಲ್ಲಿಲ್ಲದ ಕ್ರೇಜ್. ಗಂಡು ಮಕ್ಕಳಂತೆ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುವ ಈಕೆ ಬೈಕ್ ನಲ್ಲಿ ಸ್ಟಂಟ್ ಕೂಡ ಮಾಡುತ್ತಾರೆ.


ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಸಂಸ್ಥೆಗೆ ಟಾಪರ್
ಎಸ್‍ಎಸ್‍ಎಲ್‍ಸಿಯಲ್ಲಿ ಶೇ.87 ಅಂಕ ಗಳಿಸಿ ಶಾಲೆಗೆ ಟಾಪರ್. ಕಾರ್ಕಳದ ಸರಕಾರಿ ಪಿಯು ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಶೇ.90 ಅಂಕ ಗಳಿಸಿ ವಿಭಾಗದ ಟಾಪರ್ ಆಗಿದ್ದರು. ಓದಿನಲ್ಲಿ ಸದಾ ಮುಂದಿರುತ್ತಿದ್ದ ಜ್ಯೋತಿ, ಪಠ್ಯೇತರ ಚಟುವಟಿಕೆಗಳಲ್ಲೂ ಚುರುಕಿನಿಂದ ಭಾಗವಹಿಸುತ್ತಿದ್ದರು.


“ಗ್ರಾಮೀಣ ಭಾಗದಲ್ಲಿ ಹಲವು ಪ್ರತಿಭಾನ್ವಿತರು ಇರುತ್ತಾರೆ. ಅಂತಹವರನ್ನು ಗುರುತಿಸಿ, ಅವಕಾಶ ನೀಡಬೇಕು”
-ಜ್ಯೋತಿ


ಮುಂದೆ ಮಹಿಳಾ ತಂಡದಲ್ಲಿ ಕ್ರಿಕೆಟ್ ಆಡಬೇಕೆಂಬ ಜ್ಯೋತಿ ಅವರ ಕನಸು ನನಸಾಗಲಿ. ಅವರ ಸಾಧನೆ ಮತ್ತಷ್ಟು ಎಲೆಮರೆಯ ಕಾಯಿಗಳಿಗೆ ಪ್ರೇರಣೆಯಾಗಲಿ.

Advertisement
web